Gauribidanur : ಗೌರಿಬಿದನೂರು ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಲೋಕಾಯುಕ್ತ (Lokayukta) ಅಧಿಕಾರಿಗಳ ನೇತೃತ್ವದಲ್ಲಿ ಸಾರ್ವಜನಿಕ ಕುಂದುಕೊರತೆಗಳ ಸಭೆ (Public Grievances Meeting) ನಡೆಯಿತು. ಸಭೆಯಲ್ಲಿ ಒಟ್ಟು 26 ಅರ್ಜಿಗಳು ಸಲ್ಲಿಕೆಯಾದವು. ಅಧಿಕಾರಿಗಳು ಅರ್ಜಿಗಳನ್ನು ಪಡೆದು ಅವುಗಳಿಗೆ ಹಿಂಬರಹ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಲೋಕಾಯುಕ್ತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಎಲ್.ಅರೆಸಿದ್ದಿ “ಪ್ರತಿ ಬುಧವಾರ ತಾಲ್ಲೂಕು ಮಟ್ಟದಲ್ಲಿ ಸಾರ್ವಜನಿಕ ಕುಂದು ಕೊರತೆಗಳ ಸಭೆಯನ್ನು ಲೋಕಾಯುಕ್ತ ಸಂಸ್ಥೆಯು ಮಾಡುತ್ತಿದ್ದು ಅಧಿಕಾರಿಗಳು ಸಾರ್ವಜನಿಕ ಕೆಲಸಗಳನ್ನು ಮಾಡಿಕೊಡುವಲ್ಲಿ ವಿಳಂಬ, ನಿರ್ಲಕ್ಷ್ಯ ಮಾಡಿದರೆ ಸಾರ್ವಜನಿಕರು ಸೂಕ್ತ ದಾಖಲೆಗಳ ಜೊತೆ ಲೋಕಾಯುಕ್ತ ಸಂಸ್ಥೆಯನ್ನು ಸಂಪರ್ಕಿಸಬಹುದು. ಇಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ ಸಂಬಂಧಿಸಿದ ಇಲಾಖೆಗಳಿಗೆ ಕಳುಹಿಸಿಕೊಡಲಾಗುವುದು. ಆ ಅರ್ಜಿಗಳು ವಿಲೇವಾರಿಯಾದವೇ, ಸ್ಥಿತಿಗತಿಗಳೇನು ಎನ್ನುವ ಬಗ್ಗೆಯೂ ತಿಳಿಯಲಾಗುವುದು ಎಂದು ಹೇಳಿ ಅಧಿಕಾರಿಗಳು ಸೂಕ್ತ ಸಮಯಕ್ಕೆ ಅರ್ಜಿ ವಿಲೇವಾರಿ ಮಾಡಬೇಕು. ಒಂದು ವೇಳೆ ವಿಲೇವಾರಿ ಸಾಧ್ಯವಾಗದಿದ್ದರೆ ಆ ಬಗ್ಗೆ ಅರ್ಜಿದಾರರಿಗೆ ತಿಳಿಸಿ ಮೇಲಧಿಕಾರಿಗಳ ಗಮನಕ್ಕೆ ತರಬೇಕು. ಕೆಲಸ ಕಾರ್ಯಗಳಿಗಾಗಿ ಹಣಕ್ಕೆ ಬೇಡಿಕೆ ಇಟ್ಟರೆ ಕಾನೂನು ಕ್ರಮ ಜರುಗಿಸಲಾಗುವುದು” ಎಂದು ಎಚ್ಚರಿಸಿದರು.
ಸಭೆಯಲ್ಲಿ ವೀರೇಂದ್ರ ಕುಮಾರ್, ಮಹೇಶ್ ಪತ್ರಿ, ಹರೀಶ್, ಗೀತಾ, ಲಿಂಗಗರಾಜ್, ಗುರುಮೂರ್ತಿ ಮತ್ತಿತರರು ಪಾಲ್ಗೊಂಡಿದ್ದರು.