Melur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮೇಲೂರಿನ ರೈತ ನಾರಾಯಣಮೂರ್ತಿ ಅವರ ಕುರಿಗಳ ಶೆಡ್ಡಿನೊಳಗೆ ಸೋಮವಾರ ಮಧ್ಯಾಹ್ನ 11.30 ರ ಸುಮಾರಿಗೆ ಬೀದಿನಾಯಿಗಳು ದಾಳಿ ಮಾಡಿ ಕುರಿಗಳನ್ನು ಕಚ್ಚಿಹಾಕಿವೆ.
ಗರ್ಭಾವಸ್ಥೆಯಲ್ಲಿದ್ದ ನಾಲ್ಕು ಕುರಿಗಳು ಮೃತಪಟ್ಟಿವೆ. ಏಳು ಕುರಿಗಳಿಗೆ ಪಶುವೈದ್ಯರು ಬಂದು ಹೊಲಿಗೆಗಳನ್ನು ಹಾಕಿದ್ದಾರೆ.
“ಕುರಿಶೆಡ್ಡಿಗೆ ಬೀಗ ಹಾಕಿದ್ದೆವು. ಸುಮಾರು ಐದು ಅಡಿಗಳಷ್ಟು ಎತ್ತರದ ಕಾಂಪೌಂಡ್ ಗೋಡೆ ಹಾರಿ ಬಂದ ಎಂಟು ಬೀದಿ ನಾಯಿಗಳು ಕುರಿಗಳ ಮೇಲೆ ಧಾಳಿ ಮಾಡಿವೆ. ನಾವು ಬಂದು ನೋಡಿ ಓಡಿಸಲು ಹೋದಾಗ ನಾಯಿಗಳು ನಮ್ಮನ್ನೇ ಕಚ್ಚಲು ಬಂದವು. ಕಳೆದ ಎರಡು ದಿನಗಳ ಹಿಂದೆಯಷ್ಟೇ ರಾಮಚಂದ್ರಪ್ಪನವರ ನಾಟಿ ಕೋಳಿ ಫಾರಂ ಒಳಗೂ ಬೀದಿ ನಾಯಿಗಳು ಪ್ರವೇಶಿಸಿದ್ದವು. ತಕ್ಷಣವೇ ಅವರು ಎಚ್ಚೆತ್ತುಕೊಂಡಿದ್ದರಿಂದ ತೊಂದರೆ ತಪ್ಪಿತು. ಭಕ್ತರಹಳ್ಳಿಯ ಪಶುವೈದ್ಯ ಡಾ.ಚಂದನ್ ಬಂದು ನಮ್ಮ ಏಳು ಕುರಿಗಳಿಗೆ ಹೊಲಿಗೆ ಹಾಕಿ ಬದುಕಿಸಿದರು. ಈ ಬೀದಿ ನಾಯಿಗಳಿಂದ ನಮಗೆ ತೊಂದರೆ ತಪ್ಪಿದ್ದಲ್ಲ. ಇದಕ್ಕೆ ಸಂಬಂಧಪಟ್ಟವರು ಕಡಿವಾಣ ಹಾಕಬೇಕಿದೆ. ನಮಗೆ ಆದ ನಷ್ಟಕ್ಕೆ ಪರಿಹಾರ ನೀಡಬೇಕು” ಎಂದು ರೈತ ನಾರಾಯಣಮೂರ್ತಿ ತಿಳಿಸಿದರು.