Chikkaballapur : ಮಿಷನ್ ಇಂದ್ರ ಧನುಷ್ (Mission Indra Dhanush) ಕಾರ್ಯಕ್ರಮವು ಆಗಸ್ಟ್ 7 ರಿಂದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಚಾಲನೆಗೊಳ್ಳುತ್ತಿದ್ದು ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ನಗರದಲ್ಲಿ ಬುಧವಾರ ನಡೆದ ಜಿಲ್ಲಾ ಆರೋಗ್ಯ ಕಾರ್ಯಪಡೆ(ಟಾಸ್ಕ್ ಫೋರ್ಸ್) ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಸೂಚಿಸಿದರು.
ಮಿಷನ್ ಇಂದ್ರ ಧನುಷ್ ಕಾರ್ಯಕಮದಡಿ ಆರೋಗ್ಯ ಇಲಾಖೆಯಿಂದ ನೀಡುವ ವಿವಿಧ ಲಸಿಕೆಗಳಿಂದ ವಂಚಿತರಾದ ಗರ್ಭಿಣಿಯರು, ಐದು ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡುವ ಉದ್ದೇಶ ಹೊಂದಲಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ದಡಾರ ಮತ್ತು ರುಬೆಲ್ಲಾ (measles and rubella) ಕಾಯಿಲೆ ನಿರ್ಮೂಲನೆಗೆ ಎಂಆರ್ ಲಸಿಕೆ ಹಾಕುವ ಗುರಿ ಇದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
U-WIN ತಂತ್ರಜ್ಞಾನವು ಗರ್ಭಿಣಿಯರಿಗೆ ಮತ್ತು ಹುಟ್ಟಿದ ಮಗುವಿನಿಂದ ಹಿಡಿದು ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೆ ನೀಡುವ ಲಸಿಕೆಗಳ ವಿವರಗಳನ್ನು ನಮೂದಿಸಲು ಅಭಿವೃದ್ಧಿಪಡಿಸಿರುವ ಹೊಸ ತಂತ್ರಜ್ಞಾನವಾಗಿದ್ದು ಇದರಿಂದ ಗರ್ಭಿಣಿಯರು ಹಾಗೂ ಐದು ವರ್ಷದೊಳಗಿನ ಮಕ್ಕಳು ಮುಂಚಿತವಾಗಿಯೇ ಲಸಿಕಾಕರಣದ ದಿನಾಂಕವನ್ನು ಸ್ವಯಂ ನೋಂದಣಿ ಮಾಡಿಸಿಕೊಳ್ಳಲು ಅವಕಾಶವಿದೆ. ಈ ವರ್ಗದ ಪೋಷಕರು ಜಾಗೃತಿ ವಹಿಸಿದರೆ ಅರ್ಹರೆಲ್ಲರೂ ಲಸಿಕೆ ಪಡೆಯಬಹುದು. ಲಸಿಕಾಕರಣದ ನಂತರ ಇ-ಡಿಜಿಟಲ್ ಪ್ರಮಾಣಪತ್ರ ಪಡೆಯಬಹುದು ಎಂದು ಪಿ.ಎನ್.ರವೀಂದ್ರ ತಿಳಿಸಿದರು.