
Sidlaghatta : ಕೈವಾರ ತಾತಯ್ಯನವರ ಜಯಂತಿಯಲ್ಲಿ ಶಾಸಕ ಪ್ರದೀಪ್ ಈಶ್ವರ್ ಅವರು ನೀಡಿದ ಹೇಳಿಕೆ ಹಾಗೂ ಅವರ ಮಾತನಾಡುವ ರೀತಿ ಅವರಿಗೆ ಶೋಭೆ ತರುವಂತಿಲ್ಲ ಎಂದು ಬಿಜೆಪಿ ಮುಖಂಡ, ನಗರಸಭೆ ಸದಸ್ಯ ಎಸ್. ರಾಘವೇಂದ್ರ ಖಂಡಿಸಿದರು.
ನಗರದ ಕೋಟೆಯ ಶ್ರೀರಾಮ ದೇವಾಲಯದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರುದಲ್ಲಿ ನಡೆದ ಕೈವಾರ ತಾತಯ್ಯನವರ ಜಯಂತಿ ಕಾರ್ಯಕ್ರಮದಲ್ಲಿ ನಮ್ಮ ಸಮುದಾಯದ ಮುಖಂಡ ಪಿ.ಸಿ. ಮೋಹನ್ ಸೇರಿದಂತೆ ಹಲವರಿದ್ದ ವೇದಿಕೆಯಲ್ಲಿ ನೀಡಿದ ಹೇಳಿಕೆ ನಮಗೆ ನೋವುಂಟುಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು.
“ಈ ಕಾರ್ಯಕ್ರಮ ನಿಮ್ಮಪ್ಪಂದಲ್ಲ” ಎಂಬ ನುಡಿಗಳು ಹಾಗೂ ಅವರ ಮಾತಾಡಿದ ಶೈಲಿ ಖಂಡನೀಯವಾಗಿದೆ. ಈ ಕೂಡಲೇ ಅವರು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ಪಿ.ಸಿ. ಮೋಹನ್ ಅವರು ಅಧಿಕಾರದಲ್ಲಿದ್ದಾಗ ಮಾಡಿದ ಸಾಧನೆ ಹಾಗೂ ಸಮುದಾಯಕ್ಕಾಗಿ ನೀಡಿದ ಕೊಡುಗೆಗಳನ್ನು ವೇದಿಕೆಗಳಲ್ಲಿ ಹೇಳಿಕೊಳ್ಳುವುದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದ ಅವರು, ಪ್ರದೀಪ್ ಈಶ್ವರ್ ಕೂಡಾ ನಮ್ಮ ಸಮುದಾಯಕ್ಕೆ ಕೊಡುಗೆ ನೀಡಿ, ಅದನ್ನು ವೇದಿಕೆಯಲ್ಲಿ ಹೆಸರಿಸಲು ನಮ್ಮ ಯಾವ ಅಭ್ಯಂತರವೂ ಇಲ್ಲ ಎಂದರು.
ಮುಖಂಡ ಮಹೇಶ್ ಮಾತನಾಡಿ, ಕೈವಾರ ತಾತಯ್ಯನವರ ಜಯಂತಿಗೆ ರಜೆ ಘೋಷಿಸಿದ್ದದ್ದು ಬಿಜೆಪಿ ಸರ್ಕಾರ. 3ಎ ವರ್ಗದಲ್ಲಿದ್ದ ಬಲಿಜ ಸಮುದಾಯವನ್ನು ಶೈಕ್ಷಣಿಕ ಮೀಸಲಾತಿ ಪ್ರಯೋಜನ ಪಡೆಯಲು 2ಎ ಪ್ರವರ್ಗಕ್ಕೆ ಸೇರಿಸುವಲ್ಲಿ ಪಿ.ಸಿ. ಮೋಹನ್ ಅವರ ಶ್ರಮ ಅಪಾರ ಎಂದು ಹೇಳಿದರು.
ಈ ಮೀಸಲಾತಿಯಿಂದ ಸಮುದಾಯದ ಅನೇಕ ಯುವಕರು ವೈದ್ಯ, ಎಂಜಿನಿಯರಿಂಗ್ ಶಿಕ್ಷಣವನ್ನು ಸರ್ಕಾರಿ ಕೋಟಾದಲ್ಲಿ ಪಡೆಯಲು ಸಾಧ್ಯವಾಗಿದೆ. ಇಂಥವರ ಸಾಧನೆಗೆ ಪಿ.ಸಿ. ಮೋಹನ್ ಅವರ ಕೊಡುಗೆ ದೊಡ್ಡದು. ಅವರ ಫೋಟೋವನ್ನು ನಮ್ಮ ಮನೆಯಲ್ಲಿ ಇಟ್ಟುಕೊಂಡು ಪೂಜಿಸುವಷ್ಟು ಸಮುದಾಯಕ್ಕೆ ಅವರು ಶ್ರೇಷ್ಠ ಸೇವೆ ಮಾಡಿದ್ದಾರೆ ಎಂದರು.
ಶಾಸಕ ಪ್ರದೀಪ್ ಈಶ್ವರ್ ಅವರು ನಮ್ಮ ಸಮುದಾಯಕ್ಕೆ ರಾಜಕೀಯ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಲಿ, ಆಗ ನಾವು ಅವರ ಫೋಟೋವನ್ನು ಪೂಜಿಸುತ್ತೇವೆ ಎಂದು ಸವಾಲು ಎಸೆದು, ಸಮುದಾಯಕ್ಕಾಗಿ ಒಳ್ಳೆಯದನ್ನು ಮಾಡುವ ನಿಟ್ಟಿನಲ್ಲಿ ತಮ್ಮ ಶಕ್ತಿಯನ್ನು ಬಳಸುವಂತೆ ಕೋರಿದರು.
ಸಮುದಾಯದ ಮುಖಂಡರಾದ ಸೋಮಶೇಖರ್, ಎ.ರಮೇಶ್, ನಂದುಕಿಷನ್, ಕೆ.ನರೇಶ್, ಮಾತೃಶ್ರೀ ಮೋಹನ್, ಚಲುವರಾಜ್, ಸುಬ್ರಮಣಿ, ಹರೀಶ್, ಅಶ್ವತ್ಥ್, ಕುಮಾರ್ ಹಾಜರಿದ್ದರು.