Chikkaballapur : ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿಯ (Muddenahalli) ಸತ್ಯಸಾಯಿ ಗ್ರಾಮದ (Sathya Sai Gram) ಪ್ರೇಮಾಮೃತಂ ಸಭಾಭವನದಲ್ಲಿ ಕಳೆದ ಐದು ದಿನಗಳಿಂದ ಸಮ್ಮೇಳನದಲ್ಲಿ ಸ್ವರ, ಲಯ, ಲಾಲಿತ್ಯಗಳ ಕಲರವದಿಂದ ಜೀವಕಳೆ ಪಡೆದಿದ್ದ ಕರ್ನಾಟಕ ಗಾನ ಕಲಾ ಪರಿಷತ್ತಿನ (Karnataka Ganakala Parishat) 52ನೇ ಹಿರಿಯ ಸಂಗೀತ ವಿದ್ವಾಂಸರ ಮತ್ತು 34ನೇ ಕಿರಿಯ ಸಂಗೀತ ಸಾಧಕರ (Music Festival) ರಾಜ್ಯಮಟ್ಟದ ಸಮ್ಮೇಳದ ಸಮಾರೋಪ ಸಮಾರಂಭಕ್ಕೆ ವಿದ್ಯುಕ್ತ ತೆರೆ (Closing Ceremony) ಬಿದ್ದಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಸದ್ಗುರು ಮಧುಸೂದನ ಸಾಯಿ “ಭಾರತವು ಅವತಾರ ಪುರುಷರ ಮತ್ತು ಸಾಧುಸಂತರ ಸ್ಪರ್ಶದಿಂದ ಪುನೀತವಾಗಿರುವ ತಪೋಭೂಮಿಯಾಗಿದ್ದು, ಸತ್ ಪರಂಪರೆ ಇಲ್ಲಿನ ಸಂಸ್ಕೃತಿಯ ಜೀವಾಳ. ಭಗವಂತ ನಾದಪ್ರಿಯ, ಗಾನಲೋಲ. ಆತನನ್ನು ಸ್ಮರಿಸಿದಲ್ಲಿ ಭಗವಂತನ ಸಾನಿಧ್ಯ ಶತಸಿದ್ಧ. ಸಂಗೀತ ಗುರುಮುಖೇನ ಗುರು ಪರಂಪರೆಯಿಂದ ಸಾಗಿ ಬಂದ ಸಂಸ್ಕೃತಿಯ ಬೆನ್ನೆಲುಬಾಗಿದೆ” ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಸಂಗೀತ ವಿದ್ವಾಂಸರ ಸಮ್ಮೇಳನದ ಅಧ್ಯಕ್ಷೆ ಡಾ.ನಾಗವಲ್ಲಿ ನಾಗರಾಜ್ ಅವರಿಗೆ ಗಾನ ಕಲಾಭೂಷಣ ಬಿರುದು, ಯುವ ಸಮ್ಮೇಳನದ ಅಧ್ಯಕ್ಷ ಸಂಪಗೋಡು ಎಸ್. ವಿಘ್ನರಾಜ ಅವರಿಗೆ ಗಾನ ಕಲಾಶ್ರೀ ಪುರಸ್ಕಾರ ಹಾಗೂ ವೀಣಾ ವಾದಕ ವಿದ್ವಾನ್ ಆರ್.ಕೆ.ಪದ್ಮನಾಭ್, ಬಿ.ಆರ್.ಗೀತಾ, ವರದರಾಜ್ ಪಿಟೀಲು ವಾದಕ ಪಿ.ಎನ್.ನಾಗರಾಜ್, ಘಟಂ ವಾದಕ ಎಂ.ಆರ್.ಮಂಜುನಾಥ್, ಗಾನಕಲಾ ಪರಿಷತ್ತಿನ ಕಾರ್ಯದರ್ಶಿ ರೂಪ ಶ್ರೀಧರ್, ಎನ್.ವರದರಾಜನ್ ಅವರಿಗೆ ಗಾನ ಕಲಾ ಕಸ್ತೂರಿ ಬಿರುದನ್ನು ನೀಡಿ ಗೌರವಿಸಲಾಯಿತು.