Muddenahalli, Chikkaballapur : ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದಲ್ಲಿ ಸೋಮವಾರದಿಂದ ನವರಾತ್ರಿ ಉತ್ಸವಗಳು ಧಾರ್ಮಿಕ ಭಕ್ತಿ ಹಾಗೂ ಸಡಗರ ಸಂಭ್ರಮದ ನಡುವೆ ಆರಂಭಗೊಂಡವು. ಉತ್ಸವದ ಮೊದಲ ದಿನ ಅತಿ ರುದ್ರ ಮಹಾಯಜ್ಞಕ್ಕೆ ಸದ್ಗುರು ಮಧುಸೂದನ ಸಾಯಿ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಚಾಲನೆ ನೀಡಿದರು.
ಶೃಂಗೇರಿ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ 121 ಪುರೋಹಿತರು ವೇದಮಂತ್ರಗಳ ಪಠಣದೊಂದಿಗೆ ಶಾಸ್ತ್ರೋಕ್ತ ವಿಧಿವಿಧಾನಗಳನ್ನು ನೆರವೇರಿಸಿ ಯಾಗವನ್ನು ಆರಂಭಿಸಿದರು. ಗಣಪತಿ ಪೂಜೆಯೊಂದಿಗೆ ಯಜ್ಞಕ್ಕೆ ಆರಂಭಿಕ ಕ್ರಿಯೆ ನಡೆಯಿತು.
ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಸದ್ಗುರು ಮಧುಸೂದನ ಸಾಯಿ ಅವರು, “ಈ ಯಾಗವು ಲೋಕಕಲ್ಯಾಣಕ್ಕಾಗಿ. ಜಗತ್ತಿನಲ್ಲಿ ಶಾಂತಿ ಮತ್ತು ಸಮೃದ್ಧಿ ನೆಲೆಸಬೇಕೆಂಬುದು ನಮ್ಮ ಪ್ರಾರ್ಥನೆ. ಸತ್ಯ ಸಾಯಿ ಬಾಬಾ ಅವರ ಸೂಚನೆಯಂತೆ 2015ರಿಂದ ಅತಿ ರುದ್ರ ಮಹಾಯಜ್ಞವನ್ನು ನಿರಂತರ ನಡೆಸುತ್ತಿದ್ದು, ದೇವರ ಅನುಗ್ರಹದಿಂದ ಈ ಭಾಗದಲ್ಲಿ ಮಳೆ ಕೊರತೆ ಕಾಣಿಸಿಲ್ಲ” ಎಂದು ತಿಳಿಸಿದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಮಾತನಾಡಿ, “ಮುದ್ದೇನಹಳ್ಳಿ ಈಗ ಧಾರ್ಮಿಕ ಹಾಗೂ ಸಾಮಾಜಿಕ ಸೇವಾ ಚಟುವಟಿಕೆಗಳಿಂದ ದೇಶದಾದ್ಯಂತ ಗುರುತಿಸಿಕೊಳ್ಳುತ್ತಿದೆ. ಸದ್ಗುರು ಮಧುಸೂದನ ಸಾಯಿ ಅವರ ಪ್ರಯತ್ನದಿಂದ ಈ ಸ್ಥಳವು ಪರಿವರ್ತನೆ ಕಂಡಿದೆ. ಉತ್ತಮ ಆರೋಗ್ಯ ಸೇವೆ, ಶಿಕ್ಷಣ ಹಾಗೂ ಪೌಷ್ಟಿಕ ಆಹಾರ ಒದಗಿಸುವ ನಿಟ್ಟಿನಲ್ಲಿ ಅವರು ಕೈಗೊಂಡಿರುವ ಕಾರ್ಯ ಶ್ಲಾಘನೀಯ. ಅವರ ಮಹಾಸಂಕಲ್ಪದಲ್ಲಿ ನಾವು ಎಲ್ಲರೂ ಕೈಜೋಡಿಸಬೇಕು” ಎಂದು ಹೇಳಿದರು.
ನವರಾತ್ರಿಯ ಅಂಗವಾಗಿ ನಡೆಯುತ್ತಿರುವ ಈ ಮಹಾಯಜ್ಞವು ಮುಂದಿನ ದಿನಗಳಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಮುಂದುವರಿಯಲಿದೆ.
