Mulabagal : ಮುಳಬಾಗಿಲು ತಾಲ್ಲೂಕಿನ ಮರವೇಮನೆ ಗ್ರಾಮದಲ್ಲಿ ದ್ರೌಪದಮ್ಮ ದೇವಿಯ ಏಳನೆಯ ವರ್ಷದ ಕರಗ ಮಹೋತ್ಸವ ಶನಿವಾರ ಮತ್ತು ಭಾನುವಾರ ಅದ್ದೂರಿಯಾಗಿ ನೆರೆವೇರಿತು.
ಶನಿವಾರ ಮತ್ತು ಭಾನುವಾರ ದೇವಾಲಯವನ್ನು ವಿದ್ಯುತ್ ದೀಪಗಳಿಂದ ಹಾಗೂ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಶನಿವಾರ ರಾತ್ರಿ ಸುಮಾರು ಒಂದು ಗಂಟೆಗೆ ಕರಗ ಧಾರಿ ಕರಗ ಹೊತ್ತು ಆಚೆ ಬರುತ್ತಿದ್ದಂತೆ ಮಂದಿ ಚಪ್ಪಾಳೆ ತಟ್ಟುವ ಮೂಲಕ ಸ್ವಾಗತ ಕೋರಿದರು. ಮರವೇಮನೆ, ಎನ್. ಕೊತ್ತೂರು ಹಾಗೂ ಮುಷ್ಟೂರು ಗ್ರಾಮಗಳಲ್ಲಿ ಕರಗದ ಮೆರವಣಿಗೆ ನಡೆಸಲಾಯಿತು. ನಂತರ ಗ್ರಾಮದ ಗಂಗಮ್ಮ, ಯಲ್ಲಮ್ಮ, ರೇಣುಕಾ ಯಲ್ಲಮ್ಮ, ಮಾರೆಮ್ಮ, ಕನಕ ದುರ್ಗಮ್ಮ, ಮುಷ್ಟೂರು ಗಂಗಮ್ಮ ದೇವರ ಪುಷ್ಪ ಪಲಕ್ಕಿ ನಡೆಯಿತು.
ಭಾನುವಾರ ಮಧ್ಯಾಹ್ನ ಅಗ್ನಿಕುಂಡ ಪ್ರವೇಶ, ಸಂಜೆ ವಸಂತೋತ್ಸವ ಹಾಗೂ ಗಾವು ಪೂಜೆಗಳು ನಡೆದವು.