Chikkaballapur : ಶಿವರಾತ್ರಿಯ ಮರುದಿನ ಭಾನುವಾರ ಐತಿಹಾಸಿಕ ಪ್ರಸಿದ್ಧ ನಂದಿ (Nandi) ಯ ಭೋಗ ನಂದೀಶ್ವರ ಜೋಡಿ ರಥೋತ್ಸವ (Rathostava) ಶ್ರದ್ಧೆ, ಭಕ್ತಿ ಮತ್ತು ಅದ್ದೂರಿಯಿಂದ ಸಹಸ್ರಾರು ಭಕ್ತರ ಉಪಸ್ಥಿತಿಯಲ್ಲಿ ನೆರೆವೇರಿತು.
ಯೋಗ ನಂದೀಶ್ವರ, ಭೋಗನಂದೀಶ್ವರಸ್ವಾಮಿ, ಗಿರಿಜಾಂಬ, ಅಂಬಿಕಾ ಮತ್ತು ಗಣಪತಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿದ ಅಲಂಕೃತ ರಥಕ್ಕೆ ಭಾನುವಾರ ಮಧ್ಯಾಹ್ನ ಪೂಜೆ ಸಲ್ಲಿಸುವ ಮೂಲಕ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಚಾಲನೆ ನೀಡಿದರು.
ಎರಡು ರಥವನ್ನು ಒಂದರ ಹಿಂದೆ ಮತ್ತೊಂದು ರಥವನ್ನು ಭಕ್ತರು ಎಳೆಯುವ ಮೂಲಕ ದೇಗುಲ ಪ್ರದಕ್ಷಿಣೆ ಹಾಕುವರು. ಮೊದಲ ರಥವನ್ನು ಸುಗಮವಾಗಿ ಎಳೆದ ಭಕ್ತರು, ಅದರ ಹಿಂದಿದ್ದ ಗಿರಿಜಾಂಬ ಹಾಗೂ ಭೋಗ ನಂದೀಶ್ವರ ಮೂರ್ತಿಗಳಿದ್ದ ರಥವನ್ನು ಕೆಲವು ಅಡಿ ಮುಂದೆ ಎಳೆಯುತ್ತಿದ್ದಂತೆ ರಥದ ಗಾಲಿಯ ಅಚ್ಚು ಮುರಿಯಿತು ಇದರಿಂದ ಕೆಲಕಾಲ ಉದ್ವಿಗ್ನ ವಾತಾವರಣ ಸೃಷ್ಟಿಯಾಯಿತ್ತು.
ರಥೋತ್ಸವಕ್ಕೆ ವಿವಿಧ ಕಲಾ ತಂಡಗಳು ಮೆರುಗು ತುಂಬಿದ್ದವು. ದೇಗುಲದ ಸುತ್ತಲು ತಲೆ ಎತ್ತಿದ್ದ ಪೂಜಾ ಸಾಮಗ್ರಿ, ತಿಂಡಿ ತಿನಿಸು, ಆಟಿಕೆ ವಸ್ತುಗಳು, ಗೃಹೋಪಯೋಗಿ ವಸ್ತುಗಳು, ಆಲಂಕಾರಿಕ ವಸ್ತುಗಳು, ಹಣ್ಣು, ತಂಪುಪಾನಿಯ ಸೇರಿದಂತೆ ವಿವಿಧ ಬಗೆಯ ಮಳಿಗೆಗಳಲ್ಲಿ ವ್ಯಾಪಾರ ಜೋರಾಗಿತ್ತು. ಸುತ್ತಮುತ್ತಲಿನ ಪ್ರದೇಶಗಳಲ್ಲದೆ ನೆರೆಯ ರಾಜ್ಯಗಳಿಂದಲೂ ಭಕ್ತರು ನಂದಿ ಕ್ಷೇತ್ರಕ್ಕೆ ಆಗಮಿಸಿದರು.