Chikkaballapur : ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾದ ತಾಲೂಕಿನ ನಂದಿಗಿರಿಧಾಮಕ್ಕೆ (Nandihills) ಮಾರ್ಚ್ 24 ರಿಂದ ಏಪ್ರಿಲ್ 25ರವರೆಗೆ ಸೋಮವಾರದಿಂದ ಶುಕ್ರವಾರದವರೆಗೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದ್ದು (entry restriction) ಶನಿವಾರ ಮತ್ತು ಭಾನುವಾರ ಮಾತ್ರ ಪ್ರವಾಸಿಗರು ಪ್ರವೇಶ ಮಾಡಬಹುದು.
ಗಿರಿಧಾಮದ ಆರಂಭದಿಂದ 7.70 ಕಿ.ಮೀ ವರೆಗೆ ರಸ್ತೆಯ ಪುನರ್‌ನವೀಕರಣ ಕೆಲಸ ನಡೆಯುತ್ತಿದೆ. ಈ ರಸ್ತೆಯು ಕಿರಿದಾಗಿದ್ದು, ಅಪಾಯಕಾರಿ ತಿರುವುಗಳನ್ನು ಒಳಗೊಂಡಿದೆ. ಆದ್ದರಿಂದ, ಡಾಂಬರ್ ಹಾಕಲು ರಸ್ತೆ ಸಂಚಾರವನ್ನು ಒಂದು ತಿಂಗಳ ಕಾಲ ನಿರ್ಬಂಧಿಸುವಂತೆ ಗುತ್ತಿಗೆದಾರರು ವಿನಂತಿಸಿದ್ದಾರೆ.
ರಸ್ತೆ ಕಾಮಗಾರಿ ಕಾರಣ ಸಂಚಾರ ನಿರ್ಬಂಧದ ಬಗ್ಗೆ ಲೋಕೋಪಯೋಗಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಸಹ ಕೋರಿಕೆ ಸಲ್ಲಿಸಿದ್ದರು. ಈ ಎಲ್ಲಾ ಸೂಚನೆಗಳನ್ನು ಪರಿಗಣಿಸಿ, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ಪ್ರವೇಶ ನಿರ್ಬಂಧದ ಆದೇಶ ಹೊರಡಿಸಿದ್ದಾರೆ. ಸುಲ್ತಾನ್‌ಪೇಟೆ ಕಡೆಯಿಂದ ನಂದಿಗಿರಿಧಾಮಕ್ಕೆ ಮೆಟ್ಟಿಲುಗಳ ಮೂಲಕ ತೆರಳಬಹುದು. ರಸ್ತೆ ಮೂಲಕ ಗಿರಿಧಾಮ ಪ್ರವೇಶ ನಿರ್ಬಂಧವಾಗಿರುವ ಕಾರಣ ಇಲ್ಲಿ ದಟ್ಟಣೆ ಹೆಚ್ಚುವ ಸಾಧ್ಯತೆ ಇದೆ.