Chintamani : ಚಿಂತಾಮಣಿಯ ಸಾರ್ವಜನಿಕ ಆರೋಗ್ಯ ಕೇಂದ್ರದ ಬಳಿ ಮಂಗಳವಾರ 2023-24ನೇ ಸಾಲಿನ ಆರೋಗ್ಯ ಶಿಕ್ಷಣ ಮತ್ತು ಮಾಹಿತಿ ಸಂಪರ್ಕ ಕಾರ್ಯಕ್ರಮದ (National Health Awareness) ಅಡಿಯಲ್ಲಿ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಜಾನಪದ ಕಲಾತಂಡಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮಾತಾನಾಡಿದ ತಾಲ್ಲೂಕು ಆರೋಗ್ಯಾಧಿಕಾರಿ ಎಂ.ಎಸ್.ರಾಮಚಂದ್ರಾರೆಡ್ಡಿ “ಸಾರ್ವಜನಿಕರಿಗೆ ಆರೋಗ್ಯದ ಕುರಿತು ಮಾಹಿತಿ, ವಿವಿಧ ಕಾಯಿಲೆ ಹರಡುವಿಕೆ, ಚಿಕಿತ್ಸೆ, ಸರ್ಕಾರಿ ವಿವಿಧ ಆರೋಗ್ಯ ಸೌಲಭ್ಯಗಳ ಕುರಿತು ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದ್ದು ರಾಷ್ಟ್ರೀಯ ಕ್ಷಯರೋಗ, ಕುಷ್ಟರೋಗ, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಹಾಗೂ ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ರೋಗಗಳ ಕುರಿತು ಹಾಡು, ಬೀದಿನಾಟಕ ಮತ್ತಿತರ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು” ಎಂದು ಹೇಳಿದರು .
ಚಿಂತಾಮಣಿ ನಗರದ ಸಿದ್ಧಾರ್ಥ ಸಾಂಸ್ಕೃತಿಕ ಕಲಾ ತಂಡದ ಕಲಾವಿದರಾದ ಗೊಲ್ಲಹಳ್ಳಿ ನಾರಾಯಣಸ್ವಾಮಿ, ಕೃಷ್ಣಪ್ಪ, ಎಸ್.ಶ್ರೀನಿವಾಸ್, ಮುನಿನಾರಾಯಣಪ್ಪ, ಸೀನಪ್ಪ, ರಾಮಸ್ವಾಮಿ, ವೀಣಾ, ಲಕ್ಷ್ಮಿ ನರಸಿಂಹ ನಾಯಕ್, ಅಮಲು ಕಾರ್ಯಕ್ರಮ ನಡೆಸಿಕೊಟ್ಟರು. ತಾಲ್ಲೂಕು ಆರೋಗ್ಯ ನಿರೀಕ್ಷಕರಾದ ಶ್ರೀನಿವಾಸರೆಡ್ಡಿ, ಲಕ್ಷ್ಮಣರೆಡ್ಡಿ, ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಸರಸ್ವತಮ್ಮ, ಆಶಾ ಮೇಲ್ವಿಚಾರಕಿ ತ್ರಿವೇಣಿ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಭಾಗವಹಿಸಿದ್ದರು.