Sugaturu, Sidlaghatta : ಮಕ್ಕಳಲ್ಲಿ ಅಪೌಷ್ಟಿಕತೆಯನ್ನು ಹೋಗಲಾಡಿಸಿದಾಗ ಮಾತ್ರ ರೋಗನಿರೋಧಕಶಕ್ತಿಯು ವೃದ್ಧಿಯಾಗಿ ಮಕ್ಕಳಲ್ಲಿ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯ ವೃದ್ಧಿಯಾಗಿ ಸದೃಢರನ್ನಾಗಿಸಲು ಸಾಧ್ಯ ಎಂದು ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಹಾಗೂ ತಾಲ್ಲೂಕು ಅಕ್ಷರದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಆಂಜನೇಯ ತಿಳಿಸಿದರು.
ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ತಾಲ್ಲೂಕುಪಂಚಾಯತ್ ಅಕ್ಷರದಾಸೋಹ ಕಚೇರಿಗಳ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪೋಷಣ್ ಅಭಿಯಾನ್ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರ ಶಾಲೆಗಳಲ್ಲಿ ಈಗಾಗಲೇ ಜಾರಿಗೊಳಿಸಿ ಅನುಷ್ಟಾನಗೊಳಿಸಿರುವ ಕ್ಷೀರಭಾಗ್ಯ, ಮೊಟ್ಟೆ ವಿತರಣೆ, ಬಿಸಿಯೂಟದಂತಹ ಯೋಜನೆಗಳು ಮಕ್ಕಳಲ್ಲಿ ಅಪೌಷ್ಟಿಕತೆಯನ್ನು ಹೋಗಲಾಡಿಸಲು ಸಹಕಾರಿಯಾಗಿವೆ. ಮಕ್ಕಳು ಈ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕಾದರೆ ನಿರಂತರವಾಗಿ ಶಾಲೆಗೆ ಹಾಜರಾಗಬೇಕು. ಈ ಮೂಲಕ ಮಕ್ಕಳ ಹಾಜರಾತಿ, ದಾಖಲಾತಿಯ ವೃದ್ಧಿಗೂ ಸಹಕಾರಿಯಾಗಿದೆ. ತಾಯಿಯು ಗರ್ಭಿಣಿಯಿದ್ದಾಗಿನಿಂದಲೂ ಮಗುವಿನ ಸೂಕ್ತ ಬೆಳವಣಿಗೆಗೆ ಪೂರಕವಾದ ಆಹಾರ ಘಟಕಾಂಶಗಳು, ವಿಟಮಿನ್ ಮತ್ತು ಖನಿಜಾಂಶಗಳನ್ನು ಒದಗಿಸುವ ಬಗ್ಗೆ ಅರಿವು ಹೊಂದಬೇಕು ಎಂದರು.
ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ಮಕ್ಕಳಿಗೆ ಸಮತೋಲನ ಆಹಾರವನ್ನು ಒದಗಿಸಬೇಕಾದ ಜವಾಬ್ದಾರಿಯಿದೆ. ತಿನ್ನುವ ಆಹಾರದಲ್ಲಿ ಕಾರ್ಬೊಹೈಡ್ರೇಟ್‌ಗಳು, ಪ್ರೋಟೀನ್‌ಗಳು, ವಿಟಮಿನ್, ಖನಿಜಾಂಶ, ನಾರುಪದಾರ್ಥ, ಶುದ್ಧನೀರಿನ ಘಟಕಾಂಶಗಳು ಕಡ್ಡಾಯವಾಗಿ ಇರುವಂತೆ ನೋಡಿಕೊಳ್ಳಬೇಕು. ಅಂಗನವಾಡಿಗಳ ಮೂಲಕ ಗರ್ಭಿಣಿಯರು, ಮಕ್ಕಳಿಗೆ ಸಿಗುವ ಆಹಾರಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಉತ್ತಮ ಆಹಾರಕ್ರಮಗಳ ಬಗ್ಗೆ ಅರಿವು ಹೊಂದಿರಬೇಕು ಎಂದರು.
ಶಿಕ್ಷಕ ಎ.ಬಿ.ನಾಗರಾಜ ಮಾತನಾಡಿ, ಗ್ರಾಮೀಣಭಾಗದ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚಿದ್ದು ಸಮತೋಲನ ಆಹಾರವನ್ನು ಸೇವಿಸಲು ಅರಿವುಮೂಡಿಸಬೇಕಿದೆ. ಹಣ್ಣು, ತರಕಾರಿಗಳನ್ನು ಶುದ್ಧನೀರಿನಲ್ಲಿ ಸ್ವಚ್ಚಗೊಳಿಸಿ ಬಳಸಬೇಕು ಎಂದರು.
ಶಿಕ್ಷಕಿ ಎಚ್.ತಾಜೂನ್ ಮಾತನಾಡಿ, ತಾಯಂದಿರು ಮಕ್ಕಳಿಗೆ ಸ್ತನ್ಯಪಾನ ತಪ್ಪದೇ ಮಾಡಿಸಬೇಕು.ಮಕ್ಕಳ ಕುಂಠಿತ ಬೆಳವಣಿಗೆ, ರಕ್ತಹೀನತೆ, ಅನಾರೋಗ್ಯಗಳನ್ನು ತಡೆಯಲು ಶುದ್ಧನೀರು, ನೈರ್ಮಲ್ಯವಾತಾವರಣ ಸಋಷ್ಟಿ ಅಗತ್ಯ. ಮಕ್ಕಳ ಮಾನಸಿಕ ಮತ್ತು ದೈಹಿಕ ಸ್ವಾಸ್ಥ್ಯವನ್ನು ಗುರಿಯನ್ನಾಗಿಸಿ ಆಹಾರಸೇವನೆ, ಆರೋಗ್ಯಕ್ರಮಗಳು ಅಗತ್ಯವಿದೆ ಎಂದರು.
ಚಂದ್ರಯಾನ, ಇಸ್ರೋ ಸಾಧನೆ ಬಿಂಬಿಸುವಂತೆ ವಿವಿಧ ಆಹಾರ ವಸ್ತುಗಳು, ತರಕಾರಿಗಳು, ಸೊಪ್ಪು, ಹಣ್ಣುಗಳನ್ನು ಜೋಡಿಸಿದ್ದ ಪ್ರದರ್ಶನ ಎಲ್ಲರನ್ನೂ ಆಕರ್ಷಿಸಿತು. ಆಹಾರದ ಘಟಕಾಂಶಗಳ ಬಗ್ಗೆ ಪ್ರದರ್ಶನದ ಮೂಲಕ ವಿವರಿಸಿ ಜಾಗೃತಿ ಮೂಡಿಸಲಾಯಿತು.
ಶಿಕ್ಷಕ ಬಿ.ನಾಗರಾಜು, ಆರ್.ಆಶಾ, ಅಂಗನವಾಡಿ ಕಾರ್ಯಕರ್ತೆ ಜಯಂತಿ, ಮಂಜುಳಮ್ಮ, ಸಹಾಯಕಿ ವೆಂಕಟಲಕ್ಷ್ಮ್ಮ, ರತ್ನಮ್ಮ, ಅಡುಗೆ ತಯಾರಕಿ ನಾರಾಯಣಮ್ಮ, ಭಾಗ್ಯಮ್ಮ, ಪೋಷಕರು, ವಿದ್ಯಾರ್ಥಿಗಳು ಹಾಜರಿದ್ದರು.