Nadipinayakanahallai, Sidlaghatta : ಮಕ್ಕಳ ಜ್ಞಾನಾಭಿವೃದ್ಧಿಯೊಂದಿಗೆ ವೈಜ್ಞಾನಿಕ ಮನೋಭಾವನೆ, ಅನ್ವೇಷಣೆಗೆ ಪ್ರೇರಣೆ ನೀಡಲು ವಿಜ್ಞಾನ ವಸ್ತುಪ್ರದರ್ಶನಗಳು ವಿದ್ಯಾರ್ಥಿಗಳಿಗೆ ಸಹಕಾರಿಯಾಗಿವೆ. ಮಕ್ಕಳಲ್ಲಿ ವಿಜ್ಞಾನದ ಬಗೆಗೆ ಆಸಕ್ತಿ ಹೆಚ್ಚುಸುವುದಲ್ಲದೇ ಹೊಸಹೊಸ ವಿಜ್ಞಾನದ ಸಂಶೋಧನೆಗಳಿಗೆ ವಿದ್ಯಾರ್ಥಿಗಳನ್ನು ದೂಡಬಲ್ಲದು ಎಂದು ಕ್ಷೇತ್ರಶಿಕ್ಷಣಾಧಿಕಾರಿ ಕಚೇರಿಯ ಶಿಕ್ಷಣಸಂಯೋಜಕ ಇ.ಭಾಸ್ಕರಗೌಡ ತಿಳಿಸಿದರು.
ಶಿಡ್ಲಘಟ್ಟ ತಾಲ್ಲೂಕಿನ ನಡಿಪಿನಾಯಕನಹಳ್ಳಿಯ ನವೋದಯ ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಬೆಂಗಳೂರಿನ ವಿಶ್ವೇಶ್ವರಯ್ಯ ವಿಜ್ಞಾನ ಮತ್ತು ತಂತ್ರಜ್ಞಾನ ವಸ್ತುಸಂಗ್ರಹಾಲಯಗಳ ಆಶ್ರಯದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ವಿಜ್ಞಾನ ವಸ್ತುಪ್ರದರ್ಶನ ಸ್ಪರ್ಧೆಗಳ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗಣಿತ, ಎಂಜಿನಿಯರಿಂಗ್, ಪರಿಸರ, ಜೈವಿಕತಂತ್ರಜ್ಞಾನ ಸೇರಿದಂತೆ ವಿವಿಧ ವಿಷಯಗಳಲ್ಲಿ ವಸ್ತುಪ್ರದರ್ಶನಕ್ಕೆ ಮಾದರಿ ತಯಾರಿಸಿ ಇಡಲಾಗಿದ್ದು, ವೈಯಕ್ತಿಕ, ಸಾಮೂಹಿಕ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದೆ. ಗ್ರಾಮೀಣಭಾಗದ ಮಕ್ಕಳು ವಿಜ್ಞಾನಕಲಿಕೆಯನ್ನು ಸುಲಭವಾಗಿಸಿಕೊಳ್ಳಲು ಎಲ್ಲಾ ಸೌಲಭ್ಯಗಳಿವೆ ಎಂದರು.
ನವೋದಯ ಪ್ರೌಢಶಾಲೆಯ ಮುಖ್ಯಶಿಕ್ಷಕ ಎನ್.ಕೆ.ಸತ್ಯನಾರಾಯಣ್ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಪುಸ್ತಕದ ಹುಳುಗಳಾಗದೇ ಚಟುವಟಿಕೆಶೀಲರಾಗಿ ಕಲಿಯುವಂತಾಗಬೇಕು. ವಸ್ತುಪ್ರದರ್ಶನಗಳಲ್ಲಿ ಹಿಂಜರಿಕೆ, ಕೀಳಿರಿಮೆಗಳು ಕೂಡದು. ಮಕ್ಕಳಲ್ಲಿ ಸೃಜನಶೀಲತೆಯನ್ನು ಜಾಗೃತಗೊಳಿಸುವ ಪೂರಕವಾದ ವಾತಾವರಣವನ್ನು ಸೃಷ್ಟಿಸುವ ಕಾರ್ಯವು ಶಿಕ್ಷಕರಿಂದಾಗಬೇಕು ಎಂದರು.
ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಕಾರ್ಯದರ್ಶಿ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ತಾಲ್ಲೂಕಿನಲ್ಲಿ ಎಲ್ಲಾ ಪ್ರೌಢಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗಾಗಿ ನಾಲ್ಕು ಕೇಂದ್ರಶಾಲೆಗಳಲ್ಲಿ ಪಠ್ಯಾಧಾರಿತ ವಿಜ್ಞಾನ ಚಟುವಟಿಕೆ, ಪ್ರಯೋಗಗಳ ಕಾರ್ಯಾಗಾರಗಳನ್ನು ನಡೆಸಲಾಗಿದೆ. ವಿಜ್ಞಾನಕಲಿಕೆಯನ್ನು ಸುಲಭವಾಗಿಸುವ, ಶಾಶ್ವತಕಲಿಕೆಯನ್ನಾಗಿಸುವ ಮತ್ತು ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಚಿಂತನೆ, ವೈಜ್ಞಾನಿಕಕೌಶಲಗಳನ್ನು ಹೆಚ್ಚಿಸಿ ಯುವ ಬಾಲವಿಜ್ಞಾನಿಗಳನ್ನಾಗಿ ರೂಪುಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ. ಮೂಲವಿಜ್ಞಾನದ ಕಲಿಕೆಯತ್ತ ವಿದ್ಯಾರ್ಥಿಗಳನ್ನು ಪ್ರೇರೇಪಿಸುವಂತಾಗಬೇಕು ಎಂದರು.
ತಾಲ್ಲೂಕಿನ ವಿವಿಧ ಪ್ರೌಢಶಾಲೆಗಳ ವಿದ್ಯಾರ್ಥಿಗಳು ತಯಾರಿಸಿದ್ದ ವಿಜ್ಞಾನಮಾದರಿಗಳ ಪ್ರದರ್ಶನ ನಡೆಯಿತು. ಉತ್ತಮ ಮಾದರಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಕುಂದಲಗುರ್ಕಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಪ್ರಶಾಂತಕುಮಾರ್, ಪಲಿಚೆರ್ಲು ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ನಳಿನಿ, ಮೇಲೂರು ಸರ್ಕಾರಿ ಶಾಲೆಯ ಶಿಕ್ಷಕಿ ಗಾಯಿತ್ರಿ, ನವೋದಯಶಾಲೆಯ ಶಿಕ್ಷಕರಾದ ಉಮಾಶಂಕರ್, ದ್ಯಾವಪ್ಪ, ಚೌಡರೆಡ್ಡಿ. ತಾಲ್ಲೂಕಿನ ವಿವಿಧ ಶಾಲೆಗಳ ವಿಜ್ಞಾನಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.