Chikkabllapur : ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ನೇತೃತ್ವದಲ್ಲಿ ರಾಷ್ಟ್ರೀಯ ರೇಬಿಸ್ ನಿಯಂತ್ರಣ ಕಾರ್ಯಕ್ರಮ (National Rabies Control Program (NRCP)) ಆಯೋಜನೆಯ ಅಂತರ ಇಲಾಖಾ ಸಮನ್ವಯ ಸಭೆ ನಡೆಸಲಾಯಿತು.
ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ “ಜಿಲ್ಲೆಯಲ್ಲಿ ಹಾವು ಕಡಿತ ಮತ್ತು ನಾಯಿ ಕಡಿತ ಪ್ರಕರಣಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಳವಾಗಿದ್ದು ಸಾರ್ವಜನಿಕರು, ರೈತರು ಮನೆಯಿಂದ ಹೊರಗಡೆ ಕೆಲಸ ಮಾಡುವಾಗ ಮುಂಜಾಗ್ರತಾ ಮತ್ತು ಸುರಕ್ಷಾ ಕ್ರಮಗಳನ್ನು ಅನುಸರಿಸಬೇಕು. ಹಾವು ಕಡಿತಕ್ಕೆ ಒಳಪಟ್ಟರೆ ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆ ಸಂಪರ್ಕಿಸಿ ಔಷಧೋಪಚಾರ ಮಾಡಿಸಿಕೊಳ್ಳಬೇಕು. ಈ ಚಿಕಿತ್ಸೆಗೆ ಚುಚ್ಚು ಮದ್ದು ಹಾಗೂ ಆರೋಗ್ಯ ಸೇವೆಯು ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಔಷಧ ದಾಸ್ತಾನು ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಸದಾಕಾಲ ಲಭ್ಯವಿರುತ್ತದೆ. ಪಶುಪಾಲನಾ ಇಲಾಖೆಯ ಸಹಯೋಗದಲ್ಲಿ ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರ ಚಿಕಿತ್ಸೆಗೆ ನಗರ, ಗ್ರಾಮ ಸ್ಥಳೀಯಾಡಳಿತ ಸಂಸ್ಥೆಗಳು ಮುಂದಾಗಬೇಕು. ಬೀದಿ ನಾಯಿಗಳ ಹಾವಳಿಯನ್ನು ಆಗ ಮಾತ್ರ ತಪ್ಪಿಸಲು ಸಾಧ್ಯವಾಗಲಿದೆ. ನಾಯಿಗಳ ಹಾವಳಿ ಕಡಿಮೆಯಾದರೆ ಶೇ 99ರಷ್ಟು ರೇಬಿಸ್ ಪ್ರಕರಣಗಳು ಕಡಿಮೆ ಆಗಲಿವೆ” ಎಂದು ತಿಳಿಸಿ, ರೇಬಿಸ್ ಕಾಯಿಲೆಯ ನಿಯಂತ್ರಣದ ಬಗ್ಗೆ ಅರಿವು ಮೂಡಿಸಲು ಸೆ.28 ರಂದು ವಿಶ್ವ ರೇಬಿಸ್ ದಿನಾಚರಣೆಯನ್ನು ಜಿಲ್ಲೆಯಲ್ಲಿ ಆಚರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಸ್ ಮಹೇಶ್ ಕುಮಾರ್, ಜಿಲ್ಲಾ ಆರೋಗ್ಯ ಸರ್ವೇಕ್ಷಣಾಧಿಕಾರಿ ಡಾ. ಕೃಷ್ಣ ಪ್ರಸಾದ್, ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ.ಸಂತೋಷ್ ಬಾಬು, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಉಮಾ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಪ್ರಕಾಶ್, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಶಿವಕುಮಾರ್, ಡಾ ರವಿ ಕುಮಾರ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.