Sugaturu, Sidlaghatta : ವಿದ್ಯಾರ್ಥಿದಿಸೆಯಲ್ಲಿ ಔಪಚಾರಿಕ ಶಿಕ್ಷಣ ಗಳಿಕೆಯೊಂದಿಗೆ ಗ್ರಾಮಾಭಿವೃದ್ಧಿಯ ಪರಿಕಲ್ಪನೆ ಪಡೆದುಕೊಂಡು, ಬದುಕಿಗೆ ಬೇಕಾದ ಮೌಲ್ಯಯುತ ಶಿಕ್ಷಣ ಪಡೆಯಲು ರಾಷ್ಟ್ರೀಯ ಸೇವಾ ಯೋಜನಾ ಶಿಬಿರಗಳು ಸಹಕಾರಿಯಾಗಿವೆ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಎನ್.ಎಸ್.ಎಸ್ ಸಂಯೋಜನಾಧಿಕಾರಿ ಡಾ.ಆದಿನಾರಾಯಣಪ್ಪ ತಿಳಿಸಿದರು.
ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಚಿಕ್ಕಮರಳಿಯ ನಾಗಾರ್ಜುನ ಕಾಲೇಜ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್, ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹಯೋಗದಲ್ಲಿ ಸೋಮವಾರ ನಡೆದ ಏಳು ದಿನಗಳ ಕಾಲದ ಸೇವಾಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಯುಪೀಳಿಗೆಯು ಗ್ರಾಮಗಳನ್ನು ಸ್ವಚ್ಚ ಮತ್ತು ಸುಂದರ ಗ್ರಾಮಗಳನ್ನಾಗಿಸುವ ನಿಟ್ಟಿನಲ್ಲಿ ಶ್ರಮಿಸಬೇಕು. ನೈರ್ಮಲ್ಯ, ಆರೋಗ್ಯ, ಶಿಕ್ಷಣದ ಬಗೆಗೆ ಗ್ರಾಮೀಣಭಾಗದ ಜನರಲ್ಲಿ ಅರಿವು ಮೂಡಿಸಲು ಶಿಬಿರಾರ್ಥಿಗಳು ಪ್ರಯತ್ನಿಸಬೇಕು. ರಾಷ್ಟ್ರ ಮತ್ತು ರಾಜ್ಯದ ಕಲ್ಯಾಣದಲ್ಲಿ ಪಾಲ್ಗೊಂಡು ನೈಜ ಸಮಾಜಸೇವೆಯಲ್ಲಿ ತೊಡಗಿಸಿಕೊಂಡು ದೇಶದ ಪ್ರಗತಿಯಲ್ಲಿ ಕೈಜೋಡಿಸಬೇಕು ಎಂದರು.
ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ರಾಷ್ಟ್ರೀಯ ಸೇವಾಯೋಜನಾ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಪ್ರಾಮಾಣಿಕತೆ, ಸಾಮಾಜಿಕ ಸೇವಾಗುಣ, ನಾಯಕತ್ವ ಗುಣ, ಸಹಬಾಳ್ವೆ, ಸಮುದಾಯ ಅಭಿವೃದ್ಧಿ, ವ್ಯಕ್ತಿತ್ವ ವಿಕಸನ, ಸಂಘಟನೆ, ಮಾನವೀಯ ಗುಣ, ಶ್ರಮದಾನದಂತಹ ಅನೇಕ ಮೌಲ್ಯಗಳನ್ನು ಕಲಿಸಿಕೊಡುತ್ತವೆ. ವಿದ್ಯಾರ್ಥಿಯ ಜೀವನದಲ್ಲಿಯೇ ಆದರ್ಶಗಳನ್ನು ರೂಡಿಸಿಕೊಳ್ಳಲು ಅನುಕೂಲವಾಗಿವೆ ಎಂದರು.
ನಾಗಾರ್ಜುನ ಕಾಲೇಜ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನ ಪ್ರಾಂಶುಪಾಲೆ ಆನಂದಮ್ಮ ಮಾತನಾಡಿ, ಯುವಪೀಳಿಗೆಯು ವೈಯಕ್ತಿಕ ಸರ್ವತೋಮುಖ ಅಭಿವೃದ್ಧಿಯಲ್ಲದೇ ತ್ಯಾಗ, ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಜ್ಞೆ, ಕಳಕಳಿ, ಪ್ರಾಮಾಣಿಕತೆಯಂತಹ ಗುಣಗಳನ್ನು ಬೆಳೆಸಿಕೊಂಡು ರಾಮರಾಜ್ಯದ ಕನಸನ್ನು ನನಸಾಗಿಸಲು ಶ್ರಮಿಸಬೇಕು ಎಂದರು.
ಶಿಬಿರಾರ್ಥಿಗಳಿಂದ ಶ್ರಮದಾನ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಗ್ರಾ.ಪಂ ಮಾಜಿ ಸದಸ್ಯ ಶಿವಶಂಕರಪ್ಪ, ನಾಗಾರ್ಜುನ ಕಾಲೇಜಿನ ಉಪನ್ಯಾಸಕ ಅಂಬರೀಶ್, ಶಿಬಿರಾಧಿಕಾರಿಗಳಾದ ವಿಶ್ವಾಸ್, ಸುಧಾಕರ್ ಕುಲಕರ್ಣಿ, ಸ್ವಯಂಸೇವಕರಾದ ಸಿಂಧು, ಶ್ರಾವಣಿ, ಮುಖ್ಯಶಿಕ್ಷಕಿ ಉಮಾದೇವಿ, ಶಿಕ್ಷಕ ಎ.ಬಿ.ನಾಗರಾಜ, ಬಿ.ನಾಗರಾಜು, ಶಿಕ್ಷಕಿ ತಾಜೂನ್ ಹಾಜರಿದ್ದರು.