Chikkaballapur : ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ‘ಪ್ಲಾಸ್ಟಿಕ್ ಮುಕ್ತ ಚಿಕ್ಕಬಳ್ಳಾಪುರ’ (Plastic Free Chikkaballapur) ಸಮಾವೇಶದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಸ್ವಚ್ಛ ಮತ್ತು ಹಸಿರಾಗಿಸುವ ನಿಟ್ಟಿನಲ್ಲಿ ಪರಿಸರ ಸ್ನೇಹಿ ಬಟ್ಟೆ ಹಾಗೂ ಫೈಬರ್ ಬ್ಯಾಗ್ ಬಳಸುವಂತೆ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ (District Commissioner P N Ravindra) ಮನವಿ ಮಾಡಿದರು.
ಪ್ಲಾಸ್ಟಿಕ್ ಮುಕ್ತ ಜಿಲ್ಲೆಯಾಗುವ ಗುರಿಯನ್ನು ಸಾಧಿಸಲು ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ನಿಷೇಧಿಸುವುದು ಅತ್ಯಗತ್ಯ. ಬದಲಾಗಿ, ಪರ್ಯಾಯ ಉತ್ಪನ್ನಗಳ ಬಳಕೆಯನ್ನು ಅಧಿಕಾರಿಗಳು ಪ್ರೋತ್ಸಾಹಿಸಬೇಕು ಮತ್ತು ಅವುಗಳನ್ನು ಅಳವಡಿಸಿಕೊಳ್ಳಲು ಅನುಕೂಲಕರ ವಾತಾವರಣವನ್ನು ಸೃಷ್ಟಿಸಬೇಕು. ಪ್ಲಾಸ್ಟಿಕ್ ಕೊಳೆಯಲು ಬಹಳ ಸಮಯ ತೆಗೆದುಕೊಳ್ಳುತ್ತದೆ ಮತ್ತು ಇದು ಮಣ್ಣಿನೊಂದಿಗೆ ಚೆನ್ನಾಗಿ ಸಂಯೋಜಿಸುವುದಿಲ್ಲ, ಇದು ನಗರಗಳು ಮತ್ತು ಹಳ್ಳಿಗಳಲ್ಲಿ ಸ್ವಚ್ಛತೆಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಈ ಉಪಕ್ರಮವನ್ನು ಉತ್ತೇಜಿಸಲು, ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸುವ ಫಲಕಗಳನ್ನು ಅಂಗಡಿಗಳಲ್ಲಿ ಹಾಗೂ ಮುಖ್ಯ ರಸ್ತೆಗಳಲ್ಲಿ ಪ್ರದರ್ಶಿಸಬೇಕು. 75 ಮೈಕ್ರಾನ್‌ಗಿಂತ ಕಡಿಮೆ ದಪ್ಪವಿರುವ ಪ್ಲಾಸ್ಟಿಕ್ ಚೀಲಗಳನ್ನು ಬಳಸಬಾರದು. ಈ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜನರಲ್ಲಿ ಅರಿವು ಮೂಡಿಸಬೇಕು. ಸಾರ್ವಜನಿಕರ ಮನವೊಲಿಸಿ ಅವರ ಸಹಕಾರ ಪಡೆದು ಪ್ಲಾಸ್ಟಿಕ್ ಮುಕ್ತ ಚಿಕ್ಕಬಳ್ಳಾಪುರದ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪರಿಸರ ಅಧಿಕಾರಿ ಸಿದ್ದೇಶ್ವರಬಾಬು, ಚಿಂತಾಮಣಿ ನಗರಸಭಾ ಪೌರಾಯುಕ್ತ ಜಿ.ಎನ್. ಚಲಪತಿ, ಆರೋಗ್ಯ ನಿರೀಕ್ಷಕಿ ಆರತಿ, ವರ್ತಕರ ಸಂಘದ ಪ್ರತಿನಿಧಿಗಳಾದ ಕೋದಂಡರಾಮ, ಮಂಜುನಾಥ್, ಸುರೇಶ್, ನಗರಸಭೆ ಸದಸ್ಯರು ಇದ್ದರು.