Chikkaballapur : ಚಿಕ್ಕಬಳ್ಳಾಪುರ ನಗರದ ಹೊರವಲಯದ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಮಂಗಳವಾರ ಪೊಲೀಸ್ ಧ್ವಜ ದಿನಾಚರಣೆ (Police Flag Day) ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಶಿಡ್ಲಘಟ್ಟ ಗ್ರಾಮಾಂತರ ಠಾಣೆ ನಿವೃತ್ತ ಪಿಎಸ್‌ಐ ಎಂ.ಎನ್.ವಿಶ್ವನಾಥ್ ಹಾಗೂ ನಿವೃತ್ತರಾದ ಎಂಟು ಮಂದಿ ಸಿಬ್ಬಂದಿಯನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್ “ಪೊಲೀಸ್ ಇಲಾಖೆಯಲ್ಲಿ ಸೇವೆ ಮತ್ತು ತ್ಯಾಗ ಮಹತ್ವದ್ದಾಗಿದ್ದು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು, ಅಪರಾಧ ತಡೆ ಮತ್ತು ಪತ್ತೆ, ಸಾಮಾಜಿಕ ಭದ್ರತೆಯು ಪ್ರಮುಖವಾಗಿದೆ. 2023ರಲ್ಲಿ ಜಿಲ್ಲೆಯಲ್ಲಿ ಪೊಲೀಸ್ ಧ್ವಜ ಮಾರಾಟದಿಂದ ₹ 25.45 ಲಕ್ಷ ಸಂಗ್ರಹವಾಗಿದೆ. ಧ್ವಜ ಮಾರಾಟದಿಂದ ಬಂದ ಹಣವನ್ನು ಪೊಲೀಸ್ ಕ್ಷೇಮಾಭಿವೃದ್ಧಿ ನಿಧಿಗೆ ನೀಡಲಾಗುತ್ತದೆ. ಶೇ 50ರಷ್ಟು ಹಣವನ್ನು ಜಿಲ್ಲಾ ಪೊಲೀಸ್ ಕಲ್ಯಾಣ ನಿಧಿಗೆ ಮತ್ತು ಶೇ 50ರಷ್ಟು ಪೊಲೀಸ್ ಕೇಂದ್ರ ಕಲ್ಯಾಣ ನಿಧಿ ಜಮೆ ಮಾಡಲಾಗಿದೆ. 2023–24ನೇ ಸಾಲಿನಲ್ಲಿ ಪೊಲೀಸ್ ಸಿಬ್ಬಂದಿಯ ಮರಣೋತ್ತರ ಕಾರ್ಯಗಳಿಗೆ ₹ 30 ಸಾವಿರ ಮತ್ತು ಸಿಬ್ಬಂದಿ ಮತ್ತು ಅಧಿಕಾರಿಗಳ ಮಕ್ಕಳಿಗೆ ಪ್ರೋತ್ಸಾಹಧನವಾಗಿ ₹ 7.1 ಲಕ್ಷ ನೀಡಲಾಗಿದೆ. ಈ ಹಣವನ್ನು ಜಿಲ್ಲಾ ಪೊಲೀಸ್ ಕಲ್ಯಾಣ ನಿಧಿಯಿಂದ ಭರಿಸಲಾಗಿದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜಾ ಇಮಾಮ್ ಖಾಸಿಂ, ಡಿವೈಎಸ್‌ಪಿ ಶಿವಕುಮಾರ್, ಮುರುಳೀಧರ್, ಪರಮೇಶ್ ಹಾಗೂ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.