Anemadugu, Sidlaghatta : ಕೃಷಿಯಲ್ಲಿ ಕಡಿಮೆ ಬಂಡವಾಳ ಹಾಕಿ ಹೆಚ್ಚು ಇಳುವರಿ ಪಡೆದು ಆರ್ಥಿಕವಾಗಿ ಲಾಭ ಪಡೆಯುವಂತಾಗಬೇಕು. ಅದಕ್ಕಾಗಿ ನೂತನ ತಾಂತ್ರಿಕತೆಯನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳಬೇಕೆಂದು ಹಾಸನದ ಆಲೂಗಡ್ಡೆ ಸಂಶೋಧನಾ ಸಂಸ್ಥೆಯ ವಿಜ್ಞಾನಿ ಡಾ.ಪ್ರಸನ್ನಕುಮಾರ್ ತಿಳಿಸಿದರು.
ತಾಲ್ಲೂಕಿನ ಆನೆಮಡಗು ಗ್ರಾಮದ ಆಲೂಗಡ್ಡೆ ಬೆಳೆಗಾರ ರೈತ ಶಿವಣ್ಣ ಅವರ ತೋಟದಲ್ಲಿ ಮಂಗಳವಾರ ತೋಟಗಾರಿಕೆ ಇಲಾಖೆ ಹಾಗೂ ಬಶೆಟ್ಟಹಳ್ಳಿಯ ಗಂಗಾಭವಾನಿ ತೋಟಗಾರಿಕೆ ರೈತ ಉತ್ಪಾದಕರ ಕಂಪನಿಯ ಆಶ್ರಯದಲ್ಲಿ ಸಮಗ್ರ ತೋಟಗಾರಿಕೆ ಅಭಿವೃದ್ದಿ ಯೋಜನೆಯಡಿ ಆಲೂಗಡ್ಡೆ ಬೆಳೆಯಲ್ಲಿ ಎ.ಆರ್.ಸಿ ತಾಂತ್ರಿಕತೆಯಲ್ಲಿ ಗುಣಮಟ್ಟದ ಸಸಿಗಳನ್ನು ಉತ್ಪಾದನೆ ಕುರಿತು ಹಮ್ಮಿಕೊಂಡಿದ್ದ ಪ್ರಾತ್ಯಕ್ಷಿಕೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಎ.ಆರ್.ಸಿ(ಆಪಿಕಲ್ ರೂಟೆಡ್ ಕಟ್ಟಿಂಗ್ಸ್) ಪದ್ದತಿಯಲ್ಲಿ ಬಿತ್ತನೆ ಮಾಡುವುದು ಹೆಚ್ಚು ಅನುಕೂಲಕರ ಹಾಗೂ ಲಾಭದಾಯಕವಾಗುತ್ತಿದೆ. ರೋಗ ರುಜುನಗಳಿಂದಲೂ ಪಾರಾಗಬಹುದಾಗಿದೆ ಎಂದು ಎ.ಆರ್.ಸಿ ಪದ್ದತಿಯಲ್ಲಿ ಆಲೂಗಡ್ಡೆ ಬೆಳೆಯುವುದರಿಂದ ಆಗುವ ಉಪಯೋಗಗಳ ಬಗ್ಗೆ ವಿವರಿಸಿದರು.
ಹಾಸನ ಜಿಲ್ಲೆಯಲ್ಲಿ ಸಾಕಷ್ಟು ರೈತರು ಎ.ಆರ್.ಸಿ ಪದ್ದತಿಯಲ್ಲಿ ಆಲೂಗಡ್ಡೆ ಬೆಳೆದು ಯಶಸ್ವಿಯಾಗಿದ್ದು ಲಾಭದಾಯಕ ಕೃಷಿಯನ್ನು ಕೈಗೊಂಡಿದ್ದಾರೆ. ಆ ಪದ್ದತಿಯನ್ನು ರಾಜ್ಯದ ಇತರೆ ಜಿಲ್ಲೆಗಳಿಗೆ ವಿಸ್ತರಿಸುವ ಯೋಜನೆ ಇದ್ದು ಇಲಾಖೆಯಿಂದ ಈ ಬಗ್ಗೆ ಪ್ರಾತ್ಯಕ್ಷಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಸಾಮಾನ್ಯವಾಗಿ ವಾತಾವರಣದಲ್ಲಿನ ಏರುಪೇರಿನಿಂದ ರೈತರು ನಷ್ಟಕ್ಕೆ ತುತ್ತಾಗುತ್ತಿದ್ದಾರೆ. ವಾತಾವರಣ ವೈಪರೀತ್ಯಕ್ಕೆ ನಾವು ಹೊಣೆಯಲ್ಲ. ಆದರೆ ಕಡಿಮೆ ಬಂಡವಾಳ ಹಾಕಿ ಹೆಚ್ಚು ಇಳುವರಿ ಪಡೆಯುವುದು ನಮ್ಮ ಕೈಯ್ಯಲಿದ್ದು ಇದಕ್ಕೆ ನೂತನ ತಾಂತ್ರಿಕತೆಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ ಎಂದು ಹೇಳಿದರು.ರೈತರು ಪ್ರಶ್ನೆ ಕೇಳುವ ಮೂಲಕ ಎ.ಆರ್.ಸಿ ಪದ್ದತಿ ಬಗ್ಗೆ ಮಾಹಿತಿ ಪಡೆದುಕೊಂಡರು.
ತೋಟಗಾರಿಕೆ ಹಿರಿಯ ಸಹಾಯಕಿ ನಿರ್ದೇಶಕಿ ಮಂಜುಳ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಇಲಾಖೆ ಮೂಲಕ ರೈತರಿಗೆ ಸಿಗುವ ಸವಲತ್ತುಗಳ ಬಗ್ಗೆ ವಿವರಿಸಿದರು.
ಈ ವೇಳೆ ಕಳೆದ ವರ್ಷ ಆಲೂಗಡ್ಡೆ ಬೆಳೆಗೆ ವಿಮೆ ಪಾವತಿಸಲಾಗಿತ್ತು. ಬೆಳೆ ನಷ್ಟವಾದರೂ ವಿಮೆ ಹಣ ಬರಲಿಲ್ಲ ಎಂದು ಕೆಲ ರೈತರು ದೂರಿದರು. ಜತೆಗೆ ಆಲೂಗಡ್ಡೆ ಬೆಳೆಯು ನಷ್ಟಕ್ಕೆ ತುತ್ತಾದಾಗ ಬಿತ್ತನೆ ಆಲೂಗಡ್ಡೆ ಕಾರಣವಾ ಅಥವಾ ಇನ್ನೇನು ಸಮಸ್ಯೆ ಎನ್ನುವ ಇಲಾಖೆಯ ವರದಿ ನಮ್ಮ ಕೈ ಸೇರಿಲ್ಲ.
ವರದಿ ಇದ್ದರಷ್ಟೆ ನಾವು ಪರಿಹಾರಕ್ಕಾಗಿ ನ್ಯಾಯಲಯ ಅಥವಾ ಹಿರಿಯ ಅಧಿಕಾರಿಗಳಬಳಿ ಹೋಗಬಹುದು. ಆದರೆ ವರದಿಯೆ ನಮ್ಮ ಕೈ ಸೇರಿಲ್ಲ ಹಾಗಾಗಿ ನಾವು ಏನೂ ಮಾಡಲಾಗುತ್ತಿಲ್ಲ ಎಂದು ಸಮಸ್ಯೆಯನ್ನು ಹೇಳಿಕೊಂಡರು.
ಬಶೆಟ್ಟಹಳ್ಳಿಯ ಗಂಗಾಭವಾನಿ ತೋಟಗಾರಿಕೆ ರೈತ ಉತ್ಪಾದಕರ ಕಂಪನಿಯ ಅಧ್ಯಕ್ಷ ವಿಜಯಭಾವರೆಡ್ಡಿ, ಉಪಾಧ್ಯಕ್ಷ ತಿಮ್ಮನಾಯಕನಹಳ್ಳಿ ಅರುಣ್ ಕುಮಾರ್, ಆಂಜನೇಯರೆಡ್ಡಿ, ಕೆ.ಬೈರಾರೆಡ್ಡಿ, ರೈತ ಶಿವಣ್ಣ, ನಾರಾಯಣಸ್ವಾಮಿ, ದೇವರಾಜ್, ದ್ಯಾವಪ್ಪ, ಕೃಷ್ಣಪ್ಪ, ಸಿಇಒ ಮಧು ಇನ್ನಿತರೆ ಆಲೂಗಡ್ಡೆ ಬೆಳೆಗಾರರು ಹಾಜರಿದ್ದರು.