Chikkaballapur : ಕನ್ನಡ ಸಾಹಿತ್ಯ ಪರಿಷತ್ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರಾಗಿ ಪ್ರೊ.ಕೋಡಿ ರಂಗಪ್ಪ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿಯೂ ಕೈವಾರ ಶ್ರೀನಿವಾಸ್ ಅವರಿಗಿಂತ ಹೆಚ್ಚು ಮತಗಳನ್ನು ಪಡೆದು 2,379 ಮತಗಳ ಅಂತರದಿಂದ ಜಯಶೀಲರಾಗಿದ್ದಾರೆ.
ಜಿಲ್ಲೆಯಾದ್ಯಂತ ಒಟ್ಟು 4461 ಮತದಾರರು ಹಕ್ಕು ಚಲಾಯಿಸಿದ್ದು, ಪ್ರೊ.ಕೋಡಿ ರಂಗಪ್ಪ ರವರಿಗೆ 3420 ಮತಗಳು , ಮಾಜಿ ಜಿಲ್ಲಾಧ್ಯಕ್ಷ ಕೈವಾರ ಶ್ರೀನಿವಾಸ್ ರವರಿಗೆ 1041 ಮತಗಳು ದೊರೆತಿವೆ.
- ಚಿಕ್ಕಬಳ್ಳಾಪುರ ತಾಲೂಕಿನಲ್ಲಿ 1,396 ಮತಗಳು ಚಲಾವಣೆ ಆಗಿದ್ದು ಪ್ರೊ.ಕೋಡಿ ರಂಗಪ್ಪ 1037 ಮತ್ತು ಕೈವಾರ ಶ್ರೀನಿವಾಸ್ 329 ಮತಗಳನ್ನು ಪಡೆದಿದ್ದಾರೆ. 30 ಮತಗಳು ತಿರಸ್ಕೃತವಾಗಿವೆ.
- ಶಿಡ್ಲಘಟ್ಟ ತಾಲೂಕಿನಲ್ಲಿ 1,169 ಮತಗಳು ಚಲಾವಣೆ ಆಗಿದ್ದು ಪ್ರೊ.ಕೋಡಿ ರಂಗಪ್ಪ 946 ಮತ್ತು ಕೈವಾರ ಶ್ರೀನಿವಾಸ್ 194 ಮತಗಳನ್ನು ಪಡೆದಿದ್ದಾರೆ. 22 ಮತಗಳು ತಿರಸ್ಕೃತವಾಗಿವೆ.
- ಗುಡಿಬಂಡೆ ತಾಲ್ಲೂಕಿನಲ್ಲಿ 414 ಮತಗಳು ಚಲಾವಣೆಯಾಗಿ ಪ್ರೊ.ಕೋಡಿ ರಂಗಪ್ಪ ಗೆ 261 ಮತ, ಎನ್. ಶ್ರೀನಿವಾಸ್ ಗೆ 147 ಮತ ದೊರೆತಿದೆ, 6 ಮತ ತಿರಸ್ಕೃತಗೊಂಡಿದೆ.
- ಬಾಗೇಪಲ್ಲಿ ತಾಲ್ಲೂಕಿನಲ್ಲಿ 151 ಮತದಾರರು ಮತವನ್ನು ಚಲಾಯಿಸಿದ್ದು ಪ್ರೊ.ಕೋಡಿ ರಂಗಪ್ಪ 123 ಮತ ಎನ್.ಶ್ರೀನಿವಾಸ್ 28 ಮತ ಪಡೆದಿದ್ದಾರೆ .
- ಗೌರಿಬಿದನೂರು ತಾಲ್ಲೂಕಿನಲ್ಲಿ ಒಟ್ಟು 493 ಮತ ಚಲಾವಣೆಯಾಗಿದ್ದು, ಪ್ರೊ.ಕೋಡಿರಂಗಪ್ಪ ಪರ 447 ಮತಗಳು , ಎನ್.ಶ್ರೀನಿವಾಸ್ ಪರ 44 ಮತಗಳು ದೊರೆತಿವೆ .
- ಚಿಂತಾಮಣಿ ತಾಲೂಕಿನಲ್ಲಿ 921 ಮತದಾರರು ಮತವನ್ನು ಚಲಾಯಿಸಿದ್ದು ಪ್ರೊ.ಕೋಡಿ ರಂಗಪ್ಪ 609 ಮತ ಎನ್.ಶ್ರೀನಿವಾಸ್ 299 ಮತ ಪಡೆದಿದ್ದಾರೆ.
ವಿಜಯದ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಪ್ರೊ.ಕೋಡಿ ರಂಗಪ್ಪ ” ಜಿಲ್ಲೆಯ ಸಾಹಿತ್ಯಾಸಕ್ತರು, ನಿಕಟ ಪೂರ್ವ ಅಧ್ಯಕ್ಷರು, ವಿವಿಧ ಸಂಘಟನೆಗಳ ಮುಖಂಡರು ಒಮ್ಮತ ದಿಂದ ನನ್ನನ್ನು ಸ್ಪರ್ಧೆ ಮಾಡುವಂತೆ ಒತ್ತಾಯಿಸಿದ್ದರು. ಹೆಚ್ಚಿನ ಮುನ್ನಡೆಯಿಂದ ಜಿಲ್ಲೆಯ ಸಾಹಿತ್ಯಾಸಕ್ತರು ನನನ್ನು ಗೆಲಿಸಿರುವುದು ನನಗೆ ಅತೀವ ಸಂತೋಷವನ್ನು ತಂದಿದೆ. ನಾಡು, ನುಡಿ ವಿಚಾರವಾಗಿ ರಾಜ್ಯ ಮಟ್ಟದಲ್ಲಿ ನಡೆಯುವ ಹೋರಾಟಗಳಿಗೆ ನಾವು ಸಹ ಬೆಂಬಲವಾಗಿ ನಿಲ್ಲಿ ಹೋರಾಟಗಾರರ ಕೈ ಬಲಪಡಿಸಬೇಕು. ಜಿಲ್ಲೆಯಲ್ಲಿ ರಾಜ್ಯ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಸಲಾಗುವುದು. ಜಿಲ್ಲಾ ಮಟ್ಟದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಈಗಾಗಲೇ ಕ್ರಮವಹಿಸಲಾಗಿದ್ದು, ಸಚಿವರು ಹಾಗೂ ಎಲ್ಲಾ ಶಾಸಕರ ಸಹಕಾರದಲ್ಲಿ ಈ ಕಾರ್ಯವನ್ನು ಪೂರ್ಣಗೊಳಿಸಲಾಗುವುದು. ಎಲ್ಲಾ ತಾಲ್ಲೂಕುಗಳಲ್ಲಿಯೂ ಕನ್ನಡ ಭವನವನ್ನು ನಿರ್ಮಿಸಿ, ಪಂಚಾಯಿತಿ, ಹೋಬಳಿ ಮಟ್ಟದಲ್ಲಿ ಸಾಹಿತ್ಯ ಸಮ್ಮೇಳನ ನಡೆಸುವ ಬಗ್ಗೆ ಚರ್ಚಿಸಲಾಗುವುದು ” ಎಂದು ತಿಳಿಸಿದರು.