Chikkaballapur : ಚಿಕ್ಕಬಳ್ಳಾಪುರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಹಿರಿಯ ನಾಗರಿಕರ ಮತ್ತು ಅಂಗವಿಕಲರ ಕಲ್ಯಾಣ ಇಲಾಖೆ ಸಹಯೋಗ ಭಾನುವಾರ ಚಿಕ್ಕಬಳ್ಳಾಪುರ ನಗರದಲ್ಲಿ ಹಿರಿಯ ನಾಗರಿಕರ ದಿನಾಚರಣೆ (Senior Citizens Day) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ನಸಿರ್ ಅಹಮದ್, ಚಂದ್ರಶೇಖರ್, ರಂಗಣ್ಣ, ರಮೇಶ್, ಕಾಸಿರ್ ಫೀರ್ ಮತ್ತು ಸಾಹಿತಿ ಸರಸಮ್ಮ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಜಿ.ತಿಪ್ಪೇಸ್ವಾಮಿ ” ತಂದೆ ತಾಯಿಯಂತೆ ಹಿರಿಯ ನಾಗರಿಕರನ್ನು ಭಾವಿಸಿ ಅವರನ್ನು ಗೌರವಯುತವಾಗಿ ನಡೆಸಿಕೊಂಡಾಗ ಮಾತ್ರ ಅಂತಹ ಸಮಾಜ ಪರಿಪೂರ್ಣ ಸಮಾಜವಾಗುತ್ತದೆ. ವೃದ್ಧಾಪ್ಯದಲ್ಲಿ ತಂದೆ–ತಾಯಿಗಳ ಆರೋಗ್ಯ, ನೆಮ್ಮದಿಯ ಕಡೆಗೆ ಮಕ್ಕಳು ಕಾಳಜಿ ವಹಿಸಿ ಚಿಕ್ಕ ವಯಸಿನಲ್ಲಿ ಪಡೆದ ಪ್ರೀತಿ ವಾತ್ಸಲ್ಯವನ್ನು ಅವರ ಸಂಧ್ಯಾಕಾಲದಲ್ಲಿ ವಾಪಸ್ ನೀಡುವ ಕೆಲಸವನ್ನು ಮಕ್ಕಳು ಮಾಡಬೇಕು” ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಅಶ್ವತ್ಥಮ್ಮ, ಜಿಲ್ಲಾ ಅಂಗವಿಕಲರು ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಗಂಗಾಧರಯ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ವೆಂಕಟೇಗೌಡ, ನಿವೃತ್ತ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಬಿ.ವಿ. ಕೃಷ್ಣಪ್ಪ, ಉನ್ನತಿ ಸ್ವಯಂಸೇವಾ ಸಂಸ್ಥೆಯ ವಿಶ್ವನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.