Sidlaghatta : ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ (Sexual Assault) ನಡೆಸಿದ ಇಬ್ಬರು ಆರೋಪಿಗಳಿಗೆ ಜಿಲ್ಲಾ ಒಂದನೇ ಎಫ್‌ಟಿಎಸ್‌ಸಿ ನ್ಯಾಯಾಲಯವು (FTSC Court) ಮಹತ್ವದ ತೀರ್ಪು ನೀಡಿದ್ದು, 20 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ತಲಾ ₹50 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ.
ಶಿಡ್ಲಘಟ್ಟ ತಾಲ್ಲೂಕಿನ ಒಂದು ಹಳ್ಳಿಯಲ್ಲಿ 2021ರ ಸೆಪ್ಟೆಂಬರ್‌ನಲ್ಲಿ ಈ ಘಟನೆ ನಡೆದಿತ್ತು. ಈ ಸಂಬಂಧ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಿಪಿಐ ಧರ್ಮೇಗೌಡ ಅವರು ತನಿಖೆ ನಡೆಸಿ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ನ್ಯಾಯಾಧೀಶೆ ಶಾರದ ಬಿ. ಅವರು ಮೊದಲ ಮತ್ತು ಎರಡನೇ ಆರೋಪಿಗೆ ಈ ಕಠಿಣ ಶಿಕ್ಷೆಯನ್ನು ವಿಧಿಸಿ ಆದೇಶ ನೀಡಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಲಕ್ಷ್ಮಿನರಸಿಂಹಪ್ಪ ಅವರು ಸಮರ್ಥವಾಗಿ ವಾದ ಮಂಡಿಸಿದ್ದರು. ಈ ತೀರ್ಪು ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಗಟ್ಟಿ ಸಂದೇಶ ನೀಡಿದಂತಾಗಿದೆ.
