Home Sidlaghatta ಶಿವಯೋಗಿ ಸಿದ್ದರಾಮೇಶ್ವರ ಜಯಂತ್ಯುತ್ಸವ

ಶಿವಯೋಗಿ ಸಿದ್ದರಾಮೇಶ್ವರ ಜಯಂತ್ಯುತ್ಸವ

0
281

Sidlaghatta: ಕಾಯಕದ ಮಹತ್ವವನ್ನು ತಿಳಿಸಿದ ಸಿದ್ದರಾಮೇಶ್ವರರು ಮಹಾನ್ ಯೋಗಿಗಳಾಗಿದ್ದು ಅಂತಹ ಮಹನೀಯರ ತತ್ವ, ಆದರ್ಶಗಳನ್ನು ಪ್ರತಿಯೊಬ್ಬರೂ ರೂಡಿಸಿಕೊಳ್ಳಬೇಕು ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.

ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಶಿವಯೋಗಿ ಸಿದ್ದರಾಮೇಶ್ವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಹನ್ನೆರಡನೇ ಶತಮಾನದ ಖ್ಯಾತ ಪಂಚಶರಣರಲ್ಲಿ ಒಬ್ಬರಾದ ಶಿವಯೋಗಿ ಸಿದ್ದರಾಮೇಶ್ವರರು ವೈದಿಕ ಧರ್ಮದ ಮೌಡ್ಯತೆ, ಮೇಲುಕೀಳು, ವರ್ಣಧರ್ಮ ಶ್ರೇಣೀಕರಣ, ಸಂಪ್ರದಾಯಗಳಿಂದ ದೂರ ಉಳಿದು ಎಲ್ಲರೂ ಸಮಾನರು ಎಂಬ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಚಿಂತನೆಯನ್ನು ಆ ಕಾಲದಲ್ಲೇ ಹುಟ್ಟುಹಾಕಿದ್ದಾರೆ ಎಂದರು.

ಮಹನೀಯರನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸಬಾರದು. ಮುಂದಿನ ದಿನಗಳಲ್ಲಿ ಜಯಂತಿ ಆಚರಣೆಗೆ ಎಲ್ಲಾ ಸಮುದಾಯದವರನ್ನು ಸೇರಿಸಿಕೊಂಡು ಅರ್ಥಪೂರ್ಣವಾಗಿ ಆಚರಿಸುವಂತಾಗಬೇಕು ಎಂದರು.

ತಹಶೀಲ್ದಾರ್ ಬಿ.ಎನ್.ಸ್ವಾಮಿ ಮಾತನಾಡಿ, ದಯೆಯೇ ಧರ್ಮದ ಮೂಲವೆಂದು ಸಾರಿದ ವಚನಕಾರರು ಮೌಢ್ಯದ ವಿರುದ್ಧ ಜನಜಾಗೃತಿ ಮೂಡಿಸಿದ್ದರು. ಕೆರೆ ಕಟ್ಟೆಗಳನ್ನು, ಅನ್ನದಾಸೋಹ ಕಟ್ಟಡಗಳನ್ನು ಕಟ್ಟುವ ಮೂಲಕ ಕಲ್ಲು ಮಣ್ಣಿನ ಕಸುಬಿನ ಮಹತ್ವ ಎತ್ತಿಹಿಡಿದವರು ಸಿದ್ದರಾಮೇಶ್ವರರು. ದೇವರ ಬಗ್ಗೆ ಅಪಾರ ಭಕ್ತಿಯುಳ್ಳ ಶಿವಭಕ್ತರಾಗಿ, ಕರ್ಮಯೋಗಿಯಾಗಿ ಅಕ್ಷರಜ್ಞಾನದಿಂದ ವಚನಗಳನ್ನು ರಚಿಸುವ ಮೂಲಕ ಜ್ಞಾನಯೋಗಿಗಳಾಗಿದ್ದಾರೆ ಎಂದು ಹೇಳಿದರು.

ತಾ.ಪಂ ಇಓ ಜಿ.ಮುನಿರಾಜ, ಜಿ.ಪಂ ಮಾಜಿ ಸದಸ್ಯ ಬಂಕ್ ಮುನಿಯಪ್ಪ, ಸರ್ಕಲ್ ಇನ್ಸ್ ಪೆಕ್ಟರ್ ಶ್ರೀನಿವಾಸ್, ತಾಲ್ಲೂಕು ಬೋವಿ ಸಂಘದ ಅಧ್ಯಕ್ಷ ಚಿಕ್ಕನರಸಿಂಹಪ್ಪ, ಉಪಾಧ್ಯಕ್ಷ ಶ್ರೀನಿವಾಸ್, ಮುಖಂಡರಾದ ತಾದೂರು ರಘು, ರಾಜಪ್ಪ ಹಾಗೂ ಸಮುದಾಯದ ಮುಖಂಡರು ಹಾಜರಿದ್ದರು.

For Daily Updates WhatsApp ‘HI’ to 7406303366

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!