Sidlaghatta : ಶಿಡ್ಲಘಟ್ಟ ನಗರದ ನೆಹರೂ ಕ್ರೀಡಾಂಗಣದಲ್ಲಿ ಮಂಗಳವಾರ ತಾಲ್ಲೂಕು ಆಡಳಿತದಿಂದ ಆಯೋಜಿಸಲಾಗಿದ್ದ 77 ನೇ ಸ್ವಾತಂತ್ರ್ಯುತ್ಸವ ಸಮಾರಂಭದಲ್ಲಿ ಶಾಸಕ ಬಿ.ಎನ್.ರವಿಕುಮಾರ್ ಅವರು ಮಾತನಾಡಿದರು.
ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ನಾವೆಲ್ಲಾ ಕೂಡಿ ಶ್ರಮಿಸುವ ಸಂಕಲ್ಪವನ್ನು ಮಾಡೋಣ. ನಮ್ಮ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವ ಮೂಲಕ ಮಾದರಿ ಕ್ಷೇತ್ರವನ್ನಾಗಿಸುವುದು ನನ್ನ ಕನಸಾಗಿದೆ ಎಂದು ತಿಳಿಸಿದರು.
ನಮ್ಮ ದೇಶದ ಸ್ವಾತಂತ್ರ ಸಂಗ್ರಾಮದ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ನಮ್ಮ ಹಿರಿಯರು ಸ್ವಾತಂತ್ರ್ಯಕ್ಕಾಗಿ ಪಟ್ಟ ಕಷ್ಟ, ಮಾಡಿರುವ ತ್ಯಾಗವನ್ನು ಅರಿತಾಗ ದೇಶದ ಬಗ್ಗೆ ಪ್ರೀತಿ ಮೂಡುತ್ತದೆ. ಮುಂದಿನ ಪೀಳಿಗೆಗೆ ನಾವು ಅಭಿವೃದ್ಧಿಯಾದ ನಾಡನ್ನು ಉಳಿಸಿ ಹೋಗಬೇಕು. ಪರಿಸರ, ನೈರ್ಮಲ್ಯ, ಒಳ್ಳೆಯ ಶಿಕ್ಷಣ ಮತ್ತು ಆರೋಗ್ಯವನ್ನು ಕೊಡುಗೆಯಾಗಿ ಕೊಡುವುದಕ್ಕೆ ಎಲ್ಲರೂ ಒಗ್ಗೂಡಿ ಶ್ರಮಿಸೋಣ. ಆಗ ಮಾತ್ರ ಹೋರಾಟಗಾರರ ಬಲಿದಾನ ಸಾರ್ಥಕವಾಗುತ್ತದೆ ಎಂದರು.
ತಹಶೀಲ್ದಾರ್ ಬಿ.ಎನ್.ಸ್ವಾಮಿ ಮಾತನಾಡಿ, ಪ್ರತಿಯೊಬ್ಬರೂ ಸ್ವಾರ್ಥ ಮತ್ತು ದ್ವೇಷ ಭಾವನೆಗಳನ್ನು ಬಿಟ್ಟು ಸಹೋದರತೆಯಿಂದ ಸೌಹಾರ್ಧತೆಯಿಂದ ಜೀವನ ನಡೆಸಿದರೆ ದೇಶ ಅಭಿವೃದ್ಧಿ ಹೊಂದುತ್ತದೆ. ಇತಿಹಾಸದಿಂದ ನಾವು ಪಾಠ ಕಲಿಯಬೇಕು. ಬ್ರಿಟೀಷರು ನಮ್ಮನ್ನು ಆಳಲು ಕಾರಣ ನಮ್ಮಲ್ಲಿನ ಒಗ್ಗಟ್ಟಿನ ಕೊರತೆ. ದ್ವೇಷ ಅಸೂಯೆ ಮರೆತು ನಿಸ್ವಾರ್ಥವಾಗಿ ತ್ಯಾಗ ಮನೋಭಾವದಿಂದ ದೇಶವಾಸಿಗಳು ಒಗ್ಗೂಡಿದಾಗ ನಮಗೆ ಸ್ವತಂತ್ರ ಲಭಿಸಿತು. ಈಗ ನಾವು ಒಗ್ಗೂಡಿ ಅಭಿವೃದ್ಧಿಯೆಡೆಗೆ ಹೆಜ್ಜೆ ಹಾಕಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಚ್.ಡಿ ದೇವೇಗೌಡ ಮತ್ತು ಜೆ.ಪಿ ನಾರಾಯಣ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಎಸ್ಸೆಸ್ಸೆಲ್ಸಿಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ, ನಾಡೋಜ ಮುನಿವೆಂಕಟಪ್ಪ, ರೈತ ಮಹಿಳೆ ಬೋದಗೂರು ಕಮಲಮ್ಮ ಮತ್ತು ಇತರೆ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಿಗೆ ಪ್ರೋತ್ಸಾಹ ಧನ ನೀಡುವ ಮೂಲಕ ಸತ್ಕರಿಸಲಾಯಿತು. ಪಥಸಂಚಲನಕ್ಕೆ ಆಗಮಿಸಿದ್ದ ವಿದ್ಯಾರ್ಥಿಗಳಿಗೆ ಕುಡಿಯುವ ನೀರು, ಬಿಸ್ಕತ್ ಮತ್ತು ಸಿಹಿಯನ್ನು ನೀಡಲಾಯಿತು.
ನಗರದ ವಾಸವಿ ವಿದ್ಯಾಸಂಸ್ಥೆ, ಶಾರದಾ ವಿದ್ಯಾಸಂಸ್ಥೆ, ಡಾಲ್ಫಿನ್ ವಿದ್ಯಾಸಂಸ್ಥೆ, ಕ್ರೆಸೆಂಟ್ ವಿದ್ಯಾಸಂಸ್ಥೆ ಮತ್ತು ಬಶೆಟ್ಟಹಳ್ಳಿಯ ಸಾಯಿ ಇಂಟರ್ ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳು ದೇಶಭಕ್ತಿಯನ್ನು ಸಾರುವ ನೃತ್ಯರೂಪಕಗಳನ್ನು ಪ್ರದರ್ಶಿಸಿದರು.
ಶಾಸಕ ಬಿ.ಎನ್.ರವಿಕುಮಾರ್, ತಹಶೀಲ್ದಾರ್ ಬಿ.ಎನ್.ಸ್ವಾಮಿ, ತಾಲ್ಲೂಕು ಪಂಚಾಯಿತಿ ಇಒ ಮುನಿರಾಜ, ನಗರಸಭೆ ಅಧ್ಯಕ್ಷೆ ಸುಮಿತ್ರಾ ರಮೇಶ್, ಪೌರಾಯುಕ್ತ ಆಂಜನೇಯುಲು, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸುಬ್ಬಾರೆಡ್ಡಿ, ಬಂಕ್ ಮುನಿಯಪ್ಪ, ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ, ರವಿಪ್ರಸಾದ್, ಮುನಿನಂಜಪ್ಪ, ತಾದೂರು ರಘು, ಮೇಲೂರು ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರ ಕುಮಾರ್, ಬಿ.ನಾರಾಯಣಸ್ವಾಮಿ ಹಾಜರಿದ್ದರು.