Sidlaghatta : ನಗರದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರ ₹2 ಕೋಟಿಯ ಅನುದಾನ ಮಂಜೂರು ಮಾಡಿದ್ದು, ಇದರಲ್ಲಿ ₹75 ಲಕ್ಷ ಬಿಡುಗಡೆಯಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ತಿಳಿಸಿದ್ದಾರೆ ಎಂದು ಶಾಸಕ ಬಿ.ಎನ್. ರವಿಕುಮಾರ್ ತಿಳಿಸಿದರು.
ಬೆಳಗಾವಿಯಲ್ಲಿ ನಡೆದ ವಿಧಾನಸಭೆ ಅಧಿವೇಶನದಲ್ಲಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿವಿಧ ಸಚಿವರಿಂದ ಸಿಕ್ಕ ಉತ್ತರಗಳ ಬಗ್ಗೆ ಮಾಹಿತಿ ನೀಡಿದ ಅವರು, “ಅಂಬೇಡ್ಕರ್ ಭವನವನ್ನು ಸರ್ಕಾರಿ ಕಾರ್ಯಕ್ರಮಗಳು ಮತ್ತು ಇತರ ಮಹತ್ವದ ಚಟುವಟಿಕೆಗಳಿಗೆ ಬಳಸಿಕೊಳ್ಳಲು ನಿರ್ಮಿಸಲಾಗುತ್ತಿದೆ. ಬಾಕಿ ಅನುದಾನವನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡುವ ಮೂಲಕ ಭವನ ನಿರ್ಮಾಣವನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು,” ಎಂದು ಹೇಳಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ನೀಡಿದ ಲಿಖಿತ ಉತ್ತರದ ಆಧಾರದ ಮೇಲೆ, “ಗ್ರಾಮೀಣ ರಸ್ತೆ ಅಭಿವೃದ್ಧಿ ಮತ್ತು ನಿರ್ವಹಣೆಗೆ ಅಗತ್ಯ ಅನುದಾನವನ್ನು ಮಂಜೂರು ಮಾಡಲಾಗಿದೆ. ಹಾಳಾದ ರಸ್ತೆಗಳ ದುರಸ್ತಿ ಕಾರ್ಯ ಪ್ರಗತಿಯಲ್ಲಿ ಇದೆ,” ಎಂದು ಮಾಹಿತಿ ನೀಡಿದರು.
ಅದರ ಜೊತೆಗೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಲಕ್ಷ್ಮೀ ಹೆಬ್ಬಾಳಕರ್, “ಹೊಸ ಅಂಗನವಾಡಿ ಕೇಂದ್ರಗಳನ್ನು ತೆರೆಯಲು ಕೇಂದ್ರ ಸರ್ಕಾರದ ಅನುಮೋದನೆ ಪಡೆದು ಅವುಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು,” ಎಂಬ ಭರವಸೆಯನ್ನು ನೀಡಿದ್ದಾರೆ ಎಂದು ಹೇಳಿದರು.
ಈ ಎಲ್ಲಾ ಯೋಜನೆಗಳು ಸ್ಥಳೀಯ ಅಭಿವೃದ್ಧಿಗೆ ಹಾಗೂ ಜನರ ನಿತ್ಯ ಜೀವನ ಸುಧಾರಣೆಗೆ ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.