Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮ ಪಂಚಾಯಿತಿ ಸಮುದಾಯ ಭವನದಲ್ಲಿ ಜಲಜೀವನ್ ಮಿಷನ್ (Jal Jeevan Mission) ಮತ್ತು ಸ್ವಚ್ಚಭಾರತ್ ಮಿಷನ್ (Swachh Bharat Mission) ಯೋಜನೆಯಡಿ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ಅಂಗನವಾಡಿ (Anganwadi), ಆಶಾ (ASHA) ಹಾಗು ಜಲಗಾರರಿಗೆ ಆಯೋಜಿಸಲಾಗಿದ್ದ ತರಬೇತಿ ಕಾರ್ಯಾಗಾರದಲ್ಲಿ (Workshop) ಭಾಗವಹಿಸಿ ಮೇಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್.ಎ.ಉಮೇಶ್ ಮಾತನಾಡಿದರು.
ಯಾರೊಬ್ಬರೂ ಶುದ್ದ ಕುಡಿಯುವ ನೀರಿನಿಂದ ವಂಚಿತರಾಗಬಾರದು ಎಂಬುದು ಜಲಜೀವನ್ ಮಿಷನ್‌ನ ಮೂಲ ದ್ಯೇಯೋದ್ದೇಶವಾಗಿದ್ದು ಯೋಜನೆಯು ಯಶಸ್ವಿಯಾಗಿ ಅನುಷ್ಠಾನವಾಗಬೇಕಾದರೆ ಕ್ಷೇತ್ರಮಟ್ಟದ ಕಾರ್ಯಕರ್ತರ ಪಾತ್ರ ಬಹು ಮುಖ್ಯವಾಗಿದೆ. ಕುಡಿಯುವ ನೀರಿನ ಪೂರೈಕೆಗಾಗಿ ಜಾರಿಯಾಗಿರುವ ಮಹತ್ವಾಕಾಂಕ್ಷಿ ಯೋಜನೆಯಾದ ಜಲಜೀವನ್ ಮಿಷನ್ ಯೋಜನೆಯು ಭವಿಷ್ಯದ ಉತ್ತಮ ಯೋಜನೆಗಳಲ್ಲೊಂದಾಗಿದೆ. ಕಾರ್ಯಕರ್ತರು ಇದೊಂದು ಉತ್ತಮ ಸೇವೆಯ ಅವಕಾಶ ಎಂದು ಭಾವಿಸಿ ಕಾರ್ಯಪ್ರವೃತ್ತರಾಗಬೇಕು ಎಂದರು.
ಜಗಜೀವನರಾಂ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಕೃಷ್ಣಮೂರ್ತಿ ಮಾತನಾಡಿ ನೀರು, ನೈರ್ಮಲ್ಯ ಹಾಗು ಸ್ವಚ್ಚತೆ ಹೇಗೆ ಕಾಪಾಡಿಕೊಳ್ಳಬೇಕು ಅದರಲ್ಲಿ ಕ್ಷೇತ್ರಮಟ್ಟದ ಕಾರ್ಯಕರ್ತರ ಜವಾಬ್ದಾರಿ ಎಷ್ಟಿರುತ್ತದೆ ಎಂಬುದರ ಬಗ್ಗೆ ವಿವರಿಸಿದರು.
ಮೇಲೂರು ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಸಾರದ, ಭಕ್ತರಹಳ್ಳಿ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಅಂಜನ್ ಕುಮಾರ್ ಸೇರಿದಂತೆ ಮಳ್ಳೂರು, ನಾಗಮಂಗಲ, ಮಳಮಾಚನಹಳ್ಳಿ, ಭಕ್ತರಹಳ್ಳಿ ಹಾಗು ಮೇಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಗನವಾಡಿ, ಆಶಾ ಹಾಗು ಜಲಗಾರರು ಭಾಗವಹಿಸಿದ್ದರು.