
Sidlaghatta : ಶಿಡ್ಲಘಟ್ಟದಲ್ಲಿ ನಡೆದ ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್ ಮಾತನಾಡುತ್ತಾ, “ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನ, ಹೋರಾಟ ಮತ್ತು ತತ್ವಗಳು ಎಲ್ಲರಿಗೂ ಜೀವನದಲ್ಲಿ ಪ್ರೇರಣೆಯಾಗುತ್ತವೆ. ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಜಾರಿಗೆ ತರಬೇಕು” ಎಂದು ಹೇಳಿದರು.
ಡಾ. ಅಂಬೇಡ್ಕರ್ ಅವರು ದೇಶದ ಒಳಿತಿಗಾಗಿ ಹಲವು ಪದವಿಗಳನ್ನು ಪಡೆದ ಜ್ಞಾನಿಯಾಗಿದ್ದರು. ಅವರ ಶ್ರಮದಿಂದಲೇ ಇಂದು ದೇಶದ ಪ್ರತಿಯೊಬ್ಬನಿಗೂ ಸಮಾನ ಹಕ್ಕುಗಳು ದೊರಕಿವೆ ಎಂದರು.
ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭವನ, ಶಿಕ್ಷಕರ ಭವನ ಹಾಗೂ ಸರ್ಕಾರಿ ನೌಕರರ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಯಿತು.
ಶಿಡ್ಲಘಟ್ಟದಲ್ಲಿ ರೇಷ್ಮೆ ಮಾರುಕಟ್ಟೆ, ಚತುಷ್ಪಥ ರಸ್ತೆ, ಬೈಪಾಸ್ ರಸ್ತೆ ಸೇರಿದಂತೆ ಹಲವಾರು ಅಭಿವೃದ್ಧಿ ಯೋಜನೆಗಳು ಕೈಗೊಳ್ಳಲಾಗಿವೆ. ಜಿಲ್ಲೆಯಲ್ಲಿ ಹೂವಿನ ಮಾರುಕಟ್ಟೆ ಸ್ಥಾಪನೆಗೂ ಪಬ್ಲಿಕ್ ಪ್ರೈವೇಟ್ ಪಾರ್ಟ್ನರ್‌ಶಿಪ್‌ನಲ್ಲಿ ಯೋಜನೆ ರೂಪಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಸಂಸದ ಎಂ. ಮಲ್ಲೇಶ್ ಬಾಬು ಮಾತನಾಡಿ, “ಅಂಬೇಡ್ಕರ್ ಅವರು ಸಂವಿಧಾನವನ್ನು ಬರೆಯದೆ ಇರುತ್ತಿದರೆ ನಾನು ಸಂಸದನಾಗಲು ಸಾಧ್ಯವಾಗುತ್ತಿರಲಿಲ್ಲ. ದೀನ ದಲಿತರು ಅಧಿಕಾರಕ್ಕೆ ಬರೋದು ಕನಸಾಗುತ್ತಿತ್ತು. ಅವರ ಅಭೂತಪೂರ್ವ ಕೊಡುಗೆ ನಮಗೆ ಗುರುತು ಆಗಬೇಕು” ಎಂದರು.
ಶಾಸಕ ಬಿ.ಎನ್. ರವಿಕುಮಾರ್ ಅವರು, “ಈ ಕ್ಷೇತ್ರದಲ್ಲಿ ಹಲವು ಮೂಲಭೂತ ಸೌಲಭ್ಯಗಳ ಕೊರತೆಯಿದೆ. ಈಗ ಅಂಬೇಡ್ಕರ್ ಭವನ, ಗುರುಭವನ, ನೌಕರರ ಭವನ ನಿರ್ಮಾಣ ಆರಂಭವಾಗಿದೆ. ಮುಂದಿನ ವರ್ಷ 100 ಹಾಸಿಗೆಗಳ ಆಸ್ಪತ್ರೆ ನಿರ್ಮಿಸುತ್ತೇವೆ. ಎಲ್ಲರ ಸಹಕಾರದಿಂದ ‘ನಮ್ಮ ಶಿಡ್ಲಘಟ್ಟ’ ಎಂದೆ ಹೆಮ್ಮೆಪಡುವಂತಾಗಬೇಕು” ಎಂದು ಹೇಳಿದರು.
30 ವರ್ಷಗಳಿಂದ ದಲಿತ ಸಂಘಟನೆಗಳ ಹೋರಾಟದ ಫಲವಾಗಿ ಶಿಡ್ಲಘಟ್ಟದಲ್ಲಿ ₹10 ಕೋಟಿಯ ಅಂಬೇಡ್ಕರ್ ಭವನ ನಿರ್ಮಾಣ ಪ್ರಾರಂಭವಾಗಿದೆ. ಇದರ ಯಶಸ್ಸಿಗೆ ಎಲ್ಲಾ ಸಂಘಟನೆಗಳ ನಾಯಕರೂ ಹೊಣೆದಾರರು. ಈ ಭವನಕ್ಕಾಗಿ ಸಂಸದ ಮಲ್ಲೇಶ್ ಬಾಬು ₹1 ಕೋಟಿ ಅನುದಾನ ಘೋಷಿಸಿದ್ದಾರೆ.
ಕಾರ್ಯಕ್ರಮಕ್ಕೂ ಮುನ್ನ ಶ್ರದ್ಧಾಭಕ್ತಿಯಿಂದ ಮುತ್ತಿನ ಪಲ್ಲಕಿಯ ಮೆರವಣಿಗೆ, ಜನಪದ ಕಲಾ ತಂಡಗಳ ಹಾಡು ನೃತ್ಯ ನಡೆಯಿತು.
ಈ ವೇಳೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್, ಶ್ರವಣದೋಷ ಹೊಂದಿದ ವಿದ್ಯಾರ್ಥಿಗೆ ಶ್ರವಣಯಂತ್ರ, 28 ವಿಕಲಚೇತನರಿಗೆ ತ್ರಿಚಕ್ರ ವಾಹನ, 69 ಫಲಾನುಭವಿಗಳಿಗೆ ಹೊಲಿಗೆಯಂತ್ರ, 200 ಮಂದಿ ಗಾರೆ ಕೆಲಸಗಾರರಿಗೆ ಟೂಲ್ ಕಿಟ್ ಹಾಗೂ ಪ್ರತಿಭಾವಂತ 100 ವಿದ್ಯಾರ್ಥಿಗಳಿಗೆ ಪುರಸ್ಕಾರ ವಿತರಣೆ ನಡೆಯಿತು. ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಪಡೆದ ಶಿಕ್ಷಕಿಯರಿಗೆ ಸನ್ಮಾನವನ್ನೂ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಚಿವರು, ಸಂಸದರು, ಶಾಸಕರು, ಅಧಿಕಾರಿಗಳು, ಸಂಘದ ನಾಯಕರು ಸೇರಿ ಹಲವಾರು ಗಣ್ಯರು ಉಪಸ್ಥಿತರಿದ್ದರು.