
Sidlaghatta : ದೇಶದಲ್ಲಿ ಉದ್ಭವಿಸಿದ್ದ ಆಹಾರ ಸಮಸ್ಯೆಯನ್ನು ತಗ್ಗಿಸಿ, ಹಸಿರು ಕ್ರಾಂತಿಗೆ ಮುನ್ನುಡಿ ಬರೆಯುವಲ್ಲಿ ಮಹತ್ವದ ಪಾತ್ರವಹಿಸಿದ್ದ ಭಾರತದ ಮಾಜಿ ಉಪ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಡಾ. ಬಾಬು ಜಗಜೀವನರಾಮ್ ಅವರ ಆದರ್ಶಗಳನ್ನು ಎಲ್ಲರೂ ಅನುಸರಿಸಬೇಕು ಎಂದು ಶಾಸಕ ಬಿ.ಎನ್. ರವಿಕುಮಾರ್ ಹೇಳಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯ ವತಿಯಿಂದ ಹಸಿರು ಕ್ರಾಂತಿಯ ಹರಿಕಾರರಾಗಿರುವ ಬಾಬು ಜಗಜೀವನರಾಮ್ ಅವರ 118ನೇ ಜಯಂತ್ಯೋತ್ಸವ ಆಚರಣೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಕಾರ್ಮಿಕ ಸಚಿವರಾಗಿ ಜಗಜೀವನರಾಮ್ ಹಲವು ಕಾರ್ಮಿಕ ಹಕ್ಕುಗಳ ಪರಿಗಣನೆ ಮಾಡಿದ್ದು, ಅವರ ಶ್ರಮದಿಂದ ಕಾರ್ಮಿಕ ಕಾನೂನುಗಳು ಜಾರಿಗೆ ಬಂದು, ಕೆಲಸಗಾರರಿಗೆ ನ್ಯಾಯ ದೊರಕಿದುದಾಗಿ ತಿಳಿಸಿದರು. ಅವರು ಕಾರ್ಮಿಕ ಕಾನೂನುಗಳ ಶಿಲ್ಪಿಯಾಗಿದ್ದರು ಎಂದು ಅಭಿನಂದಿಸಿದರು.
ಅವರು ಸಾಮಾಜಿಕ ಸಮತೆ, ಸಾಮಾಜಿಕ ನ್ಯಾಯ, ಹಾಗೂ ದುಡಿಮೆಯ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತಾ ದೇಶದ ಅಭಿವೃದ್ಧಿಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಆಹಾರ ಕೊರತೆಗೆ ಮುಕ್ತಿ ನೀಡುವ ಹಸಿರು ಕ್ರಾಂತಿಯ ಮೂಲಕ ದೇಶದ ಜನತೆಗೆ ಭದ್ರತೆಯನ್ನು ಒದಗಿಸಿದ್ದರು ಎಂದು ನೆನೆದರು.
ಈ ಸಂದರ್ಭ ತಹಶೀಲ್ದಾರ್ ಬಿ.ಎನ್. ಸ್ವಾಮಿ ಮಾತನಾಡಿ, ‘ಬಾಬುಜಿ’ ಎಂದೇ ಜನಪ್ರಿಯರಾದ ಜಗಜೀವನ ರಾಮ್, ಧೀಮಂತ ನಾಯಕತ್ವದ ಮಾದರಿಯಾಗಿದ್ದು, ಅವರು ಸಂವಿಧಾನ ರಚನಾ ಸಭೆಯ ಸದಸ್ಯರಾಗಿದ್ದಲ್ಲದೆ ದೇಶದ ಮೊದಲ ಉಪ ಪ್ರಧಾನಿಯಾಗಿ ಮಹತ್ತರ ಸೇವೆ ಸಲ್ಲಿಸಿದ್ದಾರೆ ಎಂದರು. ಅವರು ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸುಧಾರಕ ಹಾಗೂ ಅತ್ಯುತ್ತಮ ಸಂಸದೀಯ ನಾಯಕ ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಜಗದೀಶ್, ಸರ್ಕಲ್ ಇನ್ಸ್‌ಪೆಕ್ಟರ್ ಎಂ. ಶ್ರೀನಿವಾಸ್, ಜನಜಾಗೃತಿ ಸಮಿತಿಯ ಮೇಲೂರು ಮಂಜುನಾಥ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಬಂಕ್ ಮುನಿಯಪ್ಪ, ದಿಶಾ ಸಮಿತಿಯ ವೆಂಕಟರಮಣಪ್ಪ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವೆಂಕಟೇಶಮೂರ್ತಿ, ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಕೆ.ಎನ್. ಸುಬ್ಬಾರೆಡ್ಡಿ, ವಕೀಲರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ತಾದೂರು ರಘು ಹಾಗೂ ಸಮುದಾಯದ ಹಲವರು ಉಪಸ್ಥಿತರಿದ್ದರು.