Sidlaghatta : ತ್ಯಾಗ ಮತ್ತು ಬಲಿದಾನದ ಸಂಕೇತ ಈದ್ ಉಲ್ ಅಝ್ ಹಾ (ಬಕ್ರೀದ್) ಹಬ್ಬವನ್ನು ಸೋಮವಾರ ಸಹಸ್ರಾರು ಮುಸ್ಲಿಂ ಬಾಂಧವರು ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಸಂಪ್ರದಾಯದಂತೆ ನಗರದ ಐತಿಹಾಸಿಕ ಜಾಮೀಯಾ ಮಸೀದಿಯ ಬಳಿ ಜಮಾಯಿಸಿದ ಮುಸ್ಲಿಂ ಬಾಂಧವರು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಬಳಿಕ ಮೀಲಾದ್ ಬಾಗ್ ಈದ್ಗಾ ಮೈದಾನದಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು.
ಜಾಮೀಯಾ ಮಸೀದಿಯ ಧರ್ಮಗುರು ಹಝರತ್ ಮೌಲಾನಾ ಗುಲಾಂ ಜೀಲಾನಿ ಅವರು ಬಕ್ರೀದ್ ಹಬ್ಬದ ಮಹತ್ವದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಮುಸ್ಲಿಂ ಬಾಂಧವರು ಪರಸ್ಪರ ಹಬ್ಬದ ಶುಭಾಶಯಗಳು ವಿನಿಮಯ ಮಾಡಿಕೊಂಡರು. ಆನಂತರ ಪೂರ್ವಜರ ಸಮಾಧಿಗಳ ಬಳಿ ತೆರಳಿ ಪುಷ್ಪ ನಮನ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದರು.
ಪ್ರಾರ್ಥನೆ ಸಲ್ಲಿಸಿದ ಹಝರತ್ ಇಸ್ಮಾಯಿಲ್ ಝಬೀಉಲ್ಲಾ ಅವರ ಸ್ಮರಣಾರ್ಥವಾಗಿ ಮೇಕೆ, ಕುರಿಗಳನ್ನು ಬಲಿ ನೀಡಿ ಮೂರು ಭಾಗಗಳಾಗಿ ವಿಂಗಡಿಸಿ ಮಾಂಸವನ್ನು ಹಂಚಿದರು.
ಸರ್ಕಲ್ ಇನ್ಸ್ಪೆಕ್ಟರ್ ಶ್ರೀನಿವಾಸ್ ನೇತೃತ್ವದಲ್ಲಿ ಸಬ್ ಇನ್ಸ್ಪೆಕ್ಟರ್ ವೇಣುಗೋಪಾಲ್ ಮತ್ತು ಸಿಬ್ಬಂದಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೈಗೊಂಡಿದ್ದರು.