Sidlaghatta : ಶಿಡ್ಲಘಟ್ಟ ನಗರದ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಸೋಮವಾರ ಶಿಡ್ಲಘಟ್ಟ ಟೌನ್ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ 2020-21 ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡ ಮಾತನಾಡಿದರು.
ಯಾರಿಗೂ ಸಾಲ ನೀಡದ ಸ್ಥಿತಿಯಲ್ಲಿದ್ದ ಶಿಡ್ಲಘಟ್ಟ ಟೌನ್ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘ ಇದೀಗ 18 ಕೋಟಿ ರೂಗಳಷ್ಟು ಸಾಲ ನೀಡಿದೆ. ಆದರೂ ಅದು ಸಮಾಧಾನಕರವಲ್ಲ. ಈ ಸಂಘದ ವ್ಯಾಪ್ತಿಗೆ 42 ಹಳ್ಳಿಗಳು ಸೇರುತ್ತವೆ. ಸಹಕಾರಿ ಸಂಘದ ವ್ಯಾಪ್ತಿ ಹೆಚ್ಚಬೇಕು. ತನ್ನ ವ್ಯಾಪ್ತಿಯ ಪ್ರತಿಯೊಬ್ಬ ಮಹೆಳೆಗೂ ಹಾಗೂ ರೈತನಿಗೂ ಸಾಲ ನೀಡಬೇಕು. ಖಾಸಗಿ ಬಡ್ಡಿ ಜಾಲದ ಕುಣಿಕೆಯಿಂದ ಅವರನ್ನು ತಪ್ಪಿಸುವ ಕೆಲಸ ಸಹಕಾರಿ ಸಂಘದಿಂದ ಆಗಬೇಕು. ಒಟ್ಟಾರೆ 200 ಕೋಟಿ ಸಾಲ ನೀಡುವ ಗುರಿಯನ್ನು ಸಂಘ ಹೊಂದಬೇಕು ಎಂದು ಅವರು ತಿಳಿಸಿದರು.
ಶಿಡ್ಲಘಟ್ಟ ಟೌನ್ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷ ಬಿ.ನಾರಾಯಣಸ್ವಾಮಿ ಮಾತನಾಡಿ, 2,38,62,490 ರೂಗಳಷ್ಟು ಷೇರು ಬಂಡವಾಳವನ್ನು ಸಂಘ ಹೊಂದಿದೆ. ಡಿಸಿಸಿ ಬ್ಯಾಂಕ್ ಮೂಲಕ ಕೆಸಿಸಿ, ಮಹಿಳಾ ಸ್ವಸಹಾಯ ಸಂಘಗಳಿಗೆ, ಮಧ್ಯಮಾವಧಿ ಹಾಗೂ ಕೋಳಿ ಫಾರಂಗಳಿಗೆ ಒಟ್ಟಾರೆ 18 ಕೋಟಿಗೂ ಅಧಿಕ ಸಾಲವನ್ನು ನೀಡಿದ್ದೇವೆ. ಒಂದೂವರೆ ಕೋಟಿ ರೂಗಳಷ್ಟು ಠೇವಣಿ ಸಂಗ್ರಹಣೆ ಮಾಡಿದ್ದೇವೆ. ಸುಮಾರು ಒಂದು ಕೋಟಿ ರೂಗಳಷ್ಟು ಆದಾಯವನ್ನು 2020-21 ನೇ ಸಾಲಿನಲ್ಲಿ ಸಂಘ ಗಳಿಸಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಲ ನೀಡುವ ಗುರಿಯನ್ನು ಸಂಘ ಹೊಂದಿದೆ ಎಂದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ದೇವಿಕ, ಅಧ್ಯಕ್ಷ ಬಿ.ನಾರಾಯಣಸ್ವಾಮಿ, ನಿರ್ದೇಶಕ ಜೆ.ಎನ್.ರಾಮಚಂದ್ರಪ್ಪ, ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಕೆ.ಗುಡಿಯಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಕೋಟಹಳ್ಳಿ ಶ್ರೀನಿವಾಸ್, ಪಂಕಜಾ ನಿರಂಜನ್, ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಹಾಜರಿದ್ದರು.