Bashettahalli, sidlaghatta : ಶಿಡ್ಲಘಟ್ಟ ತಾಲ್ಲೂಕಿನ ಬಶೆಟ್ಟಹಳ್ಳಿ ಹೋಬಳಿಯ ನಲ್ಲರಾಳ್ಳಹಳ್ಳಿಯ ರಾಮಲಿಂಗೇಶ್ವರ ಬೆಟ್ಟದ ರಾಮಲಿಂಗೇಶ್ವರಸ್ವಾಮಿ ಬ್ರಹ್ಮರಥೋತ್ಸವವನ್ನು ಪುಷ್ಯ ಶುಕ್ಲ ಪಕ್ಷ ಪೌರ್ಣಮಿಯ ಸೋಮವಾರದಂದು ವಿಜೃಂಭಣೆಯಿಂದ ಆಚರಿಸಲಾಯಿತು. ಸುತ್ತಮುತ್ತಲಿನ ಗ್ರಾಮಗಳಿಂದ ಹಾಗೂ ದೂರದೂರಿನಿಂದ ಸಾವಿರಾರು ಭಕ್ತರು ಈ ರಥೋತ್ಸವದಲ್ಲಿ ಪಾಲ್ಗೊಂಡರು. ಕಾರ್ಯಕ್ರಮಕ್ಕೆ ಶಾಸಕ ಬಿ.ಎನ್. ರವಿಕುಮಾರ್ ಹಾಗೂ ತಹಶೀಲ್ದಾರ್ ಬಿ.ಎನ್. ಸ್ವಾಮಿ ಚಾಲನೆ ನೀಡಿದರು.
ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ, ದೇವಾಲಯದ ಸುತ್ತ ಮೆರವಣಿಗೆ ನಡೆಸಿ, ಬಳಿಕ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಭಕ್ತರು ರಥವನ್ನು ದೇವಾಲಯದ ಸುತ್ತ ಜಯಘೋಷ ಕೂಗುತ್ತಾ ಎಳೆದರು. ಭಕ್ತಿಯಿಂದ ರಥದ ಮೇಲೆ ಬಾಳೆಹಣ್ಣು ಎಸೆದು ನಮಿಸಿದರು. ತಾಲ್ಲೂಕಿನ ವಿವಿಧ ಭಾಗಗಳಿಂದ ಭಕ್ತರು ಸೇರಿ ಈ ಪವಿತ್ರ ರಥೋತ್ಸವಕ್ಕೆ ಸಾಕ್ಷಿಯಾದರು.
ಈ ಸಂದರ್ಭದಲ್ಲಿ ಶಾಸಕ ಬಿ.ಎನ್. ರವಿಕುಮಾರ್ ಮಾತನಾಡಿ, “ರಾಮ ಮತ್ತು ಈಶ್ವರ ಒಂದೆಡೆ ಪೂಜಿತವಾಗಿರುವುದು ಅಪರೂಪ. ರಾಮನಿಂದ ಸ್ಥಾಪಿಸಲ್ಪಟ್ಟ ಇಷ್ಟಲಿಂಗವು ರಾಮಲಿಂಗೇಶ್ವರವೆಂದು ಪ್ರಸಿದ್ಧವಾಗಿದೆ. ಈ ಪವಿತ್ರ ಕ್ಷೇತ್ರದ ಜನರು ದೇವರ ಆಶೀರ್ವಾದ ಪಡೆದು ಶ್ರೇಯಸ್ಸು ಹೊಂದುತ್ತಿರಲಿ” ಎಂದರು.
ಬ್ರಹ್ಮರಥೋತ್ಸವಕ್ಕೆ ವಿವಿಧ ಜಿಲ್ಲೆಗಳಿಂದ ಬಂದ ಭಕ್ತರು ಪಾಲ್ಗೊಂಡರು. ದೇವಾಲಯದ ವಿಶೇಷತೆಗಳಲ್ಲಿ ಅತಿ ಎತ್ತರವಾದ ಧ್ವಜಸ್ತಂಭ, ದೊಡ್ಡ ಏಕಶಿಲಾ ಬಸವಣ್ಣ, ಮತ್ತು ಹನುಮಲಿಂಗ ದೇವಾಲಯ ಸೇರಿವೆ. ರಾಮ, ಲಕ್ಷ್ಮಣ, ಸೀತಾ ದೊಣೆಗಳಂತ ನೀರಿನ ಸೆಲೆಗಳು ಸದಾ ನೀರಿನಿಂದ ತುಂಬಿ ಭಕ್ತರಿಗೆ ಆಕರ್ಷಕವಾಗಿವೆ. ಇವುಗಳನ್ನು ರಾಮನು ನಿರ್ಮಿಸಿದನೆಂಬ ಜನಪ್ರತೀತಿ ಇದೆ. ಭಕ್ತರು ಈ ನೀರನ್ನು ಮೊಗೆದು ತಲೆಗೆ ಸಿಂಪಡಿಸಿಕೊಂಡು ಪುಣ್ಯ ಪಡೆಯುತ್ತಾರೆ.
ಪ್ರವಾಸೋದ್ಯಮ ಇಲಾಖೆಯ ಸಹಾಯದಿಂದ ಶೌಚಾಲಯ, ಕಾಂಪೌಂಡ್, ಮತ್ತು ಪ್ರವಾಸಿಗರಿಗಾಗಿ ಕೋಣೆಗಳನ್ನು ನಿರ್ಮಿಸಲಾಗಿದೆ. ಇವುಗಳ ಜೊತೆಗೆ ಸುಂದರ ಸ್ವಾಗತ ಕಮಾನು, ನೀರಿನ ದೊಣೆಗಳ ರಕ್ಷಣೆಗೆ ಗ್ರಿಲ್‌ಗಳು, ಮತ್ತು ದೇವಾಲಯದ ಸುತ್ತ ಕಾಂಕ್ರೀಟ್ ಹಾಕುವ ಕಾರ್ಯಗಳು ಪೂರ್ಣಗೊಂಡಿವೆ. ಈ ಅಭಿವೃದ್ಧಿ ಕಾರ್ಯದಲ್ಲಿ ಎಂ. ಸುನೀತ ಶ್ರೀನಿವಾಸರೆಡ್ಡಿ ಪ್ರಮುಖ ಪಾತ್ರ ವಹಿಸಿದ್ದಾರೆ.
ದೇವಾಲಯದ ಕನ್ ವೀನರ್ ಎಂ. ಸುನೀತ ಶ್ರೀನಿವಾಸರೆಡ್ಡಿ, ಕಾಂಗ್ರೆಸ್ ಮುಖಂಡ ರಾಜೀವ್ ಗೌಡ, ತಾದೂರು ರಘು, ಸೀಕಲ್ ಆನಂದ ಗೌಡ, ಸೀಮಾ ಇನ್ಸ್‌ಪೆಕ್ಟರ್ ಶ್ರೀನಿವಾಸ್, ಬಿ.ವಿ. ನಾರಾಯಣಸ್ವಾಮಿ, ಸುರೇಂದ್ರ ಗೌಡ, ನಗರಸಭೆ ಸದಸ್ಯ ನಾರಾಯಣಸ್ವಾಮಿ ಮತ್ತು ವೆಂಕಟೇಶ್ ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.