Sidlaghatta : ಶಂಕರಾಚಾರ್ಯರು ಭಕ್ತಿ ಮತ್ತು ಜಾನ್ಞ ಮಾರ್ಗಕ್ಕೆ ಹೆಚ್ಚು ಒತ್ತು ನೀಡಿದವರು, ಬಾಹ್ಯ ಸೌಂದರ್ಯ ಮತ್ತು ಯೌವ್ವನ ಶಾಶ್ವತಲ್ಲ ಎಂದು ಪ್ರತಿಪಾದಿಸಿ ಜ್ಞಾನಕ್ಕಿಂತ ಮಿಗಿಲಾದದ್ದು ಜಗತ್ತಿನಲ್ಲಿ ಬೇರೊಂದಿಲ್ಲ, ಹಣಕ್ಕೆ ಹೆಚ್ಚು ಮಹತ್ವ ನೀಡಬಾರದು ಎಂದು ಜಗತ್ತಿಗೆ ಸಾರಿದ ಮಹನೀಯರು ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೆಶಕ ಜಗದೀಶ್ ತಿಳಿಸಿದರು.
ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ರಾಷ್ಟ್ರೀಯ ಹಾಗೂ ನಾಡಹಬ್ಬಗಳ ಆಚರಣಾ ಸಮಿತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಶ್ರೀಶಂಕರಾಚಾರ್ಯರ ಮತ್ತು ಭಗೀರಥ ಮಹರ್ಷಿಯವರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸರಳ ಬದುಕು ನಡೆಸುವುದು ಉತ್ತಮ, ಆಡಂಬರದ ಬದುಕು ತರವಲ್ಲ, ಬದುಕಿಗೆ ಅಗತ್ಯ ಇರುವಷ್ಟು ಸಂಪತ್ತನ್ನು ಬಿಟ್ಟು ಮಿಕ್ಕಿದ್ದನ್ನು ಈ ಸಮಾಜದಲ್ಲಿನ ಅಶಕ್ತರು, ಅಗತ್ಯ ಇರುವವರಿಗೆ ದಾನ ಮಾಡಿ ಬದುಕನ್ನು ಸಾರ್ಥಕಪಡಿಸಿಕೊಳ್ಳಿ ಎಂದು ಸಂದೇಶ ಸಾರಿದ ಮಹನೀಯರು ಎಂದರು.
ಆತ್ಮಗೌರವ ಮತ್ತು ಆತ್ಮಗಳ ಅಸ್ಥಿತ್ವ ಹಾಗೂ ಮುಕ್ತಿ ಪಡೆಯಲು ಗಂಗೆಯ ಸಂಗಮ ಮುಖ್ಯ. ತನ್ನ ಪೂರ್ವಿಕರ ಬದುಕಿನ ಮುಕ್ತಿಗಾಗಿ ಗಂಗೆಯನ್ನೇ ಈ ಭೂಲೋಕಕ್ಕೆ ಕರೆಸಿ, ಶಿವನನ್ನು ಒಲಿಸಿಕೊಂಡ ಮಹರ್ಷಿ ಭಗೀರಥರಂತ ಮಹನೀಯರು, ದೈವ ಭಕ್ತರು ಜನಿಸಿದ ಈ ಪುಣ್ಯ ಭೂಮಿಯಲ್ಲಿ ನಾವು ಹುಟ್ಟಿರುವುದೆ ನಮ್ಮ ಜನ್ಮ ಸಾರ್ಥಕ ಎಂದರು.
ಸಫಾಯಿ ಕರ್ಮಚಾರಿಗಳ ಜಿಲ್ಲಾ ಪುನರ್ವಸತಿ ಸಮಿತಿ ಸದಸ್ಯ ಸಿ.ವಿ.ಲಕ್ಷ್ಮಣರಾಜು ಮಾತನಾಡಿ, ನಮ್ಮ ದೇಶದಲ್ಲಿನ ಅನೇಕ ದಾರ್ಶನಿಕರು, ಸಂತರು, ಸ್ವಾತಂತ್ರ್ಯ ಹೋರಾಟಗಾರರು, ದೇಶ ಪ್ರೇಮಿಗಳು ಜಗತ್ತಿನ ಕಣ್ಣು ತೆರೆಸಿದ್ದಾರೆ. ಈ ಸಮಾಜದಲ್ಲಿನ ಮೂಡ ನಂಬಿಕೆ, ಅಸಮಾನತೆಯನ್ನು ಹೋಗಲಾಡಿಸಿ ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಿದ್ದಾರೆ.
ನಾವು ಅವರ ಜಯಂತಿಗಳನ್ನು ಆಚರಿಸಿ ಕೈ ಮುಗಿದರೆ ಸಾಲದು, ಪುಷ್ಪ ನಮನ ಸಲ್ಲಿಸಿದರಷ್ಟೆ ಪ್ರಯೋಜನವಿಲ್ಲ. ಬದಲಿಗೆ ಮಹನೀಯರ ತತ್ವ ಆದರ್ಶಗಳನ್ನು ಸ್ವಲ್ಪವಾದರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಅವರ ಹಾದಿಯಲ್ಲಿ ಸಾಗುವ ಪ್ರಾಮಾಣಿಕ ಪ್ರಯತ್ನವನ್ನಾದರೂ ಮಾಡಬೇಕು.
ಆಗಲೆ ಮಹನೀಯರ ಜಯಂತಿಗಳ ಆಚರಣೆಗೆ ಅರ್ಥ ಬರಲಿದೆ ಮತ್ತು ನಮ್ಮ ಈ ದೇಶದ ಇತಿಹಾಸ, ಮಹನೀಯರ ಬದುಕನ್ನು ನಮ್ಮ ಮುಂದಿನ ಪೀಳಿಗೆಗೂ ತಿಳಿಸಿಕೊಡುವ ಕೆಲಸ ನಮ್ಮಿಂದ ನಿಮ್ಮಿಂದ ಆಗಲೇಬೇಕೆಂದರು.
ಮಹರ್ಷಿ ಭಗೀರಥ ಸಂಘದ ನರಸಿಂಹಪ್ಪ, ಎನ್.ಕುಮಾರ್, ಸಿಡಿಪಿಒ ನವತಾಜ್, ಶಿರಸ್ತೇದಾರ್ ಆಸೀಯಾ, ಹರೀಶ್, ನಾನಾ ಇಲಾಖೆಗಳ ಮುಖ್ಯಸ್ಥರು, ಕಂದಾಯ ಇಲಾಖೆ ಸಿಬ್ಬಂದಿ ಹಾಜರಿದ್ದರು.