
Sidlaghatta : ಜೀತ ವಿಮುಕ್ತರಿಗೆ ಜಮೀನು ಮಂಜೂರು ಮಾಡುವ ಕುರಿತು ಸರ್ಕಾರದಿಂದ ಸ್ಪಷ್ಟ ಆದೇಶವಿಲ್ಲ. ಇದರಿಂದಾಗಿ ಜಮೀನು ಮಂಜೂರಾತಿ ಕುರಿತ ಗೊಂದಲ ನಮಗೂ ಇದೆ. ಈ ಬಗ್ಗೆ ಸರ್ಕಾರದಿಂದ ಸ್ಪಷ್ಟನೆ ಪಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಉಪ ವಿಭಾಗಾಧಿಕಾರಿ ಡಿ.ಎಚ್.ಅಶ್ವಿನ್ ತಿಳಿಸಿದ್ದಾರೆ.
ಜೀತ ವಿಮುಕ್ತಿ ಕರ್ನಾಟಕ (ಜೀವಿಕ) ಸಂಘಟನೆಯ ನೇತೃತ್ವದಲ್ಲಿ ಜೀತ ವಿಮುಕ್ತರು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ತಾಲ್ಲೂಕು ಕಚೇರಿ ಆವರಣದಲ್ಲಿ ಆರಂಭಿಸಿದ್ದ ಅನಿರ್ಧಿಷ್ಟ ಧರಣಿಯ ಸ್ಥಳಕ್ಕೆ ಭೇಟಿ ನೀಡಿದ ಅವರು, ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಮಾತನಾಡಿದರು.
“ಜೀತ ವಿಮುಕ್ತರು ಜಮೀನು ಮಂಜೂರಿಗಾಗಿ ದರಕಾಸ್ತು ಸಮಿತಿಗೆ ಅರ್ಜಿ ಸಲ್ಲಿಸಿದ್ದರೆ, ನಿಯಮಾನುಸಾರ ಆಧ್ಯತೆ ನೀಡಿ ಜಮೀನು ಮಂಜೂರು ಮಾಡಲಾಗುತ್ತದೆ. ಆದರೆ ಅರ್ಜಿ ಸಲ್ಲಿಸದವರಿಗೆ ಜಮೀನನ್ನು ನೀಡುವ ಸಂಬಂಧ ಸರ್ಕಾರದ ನಿಯಮಗಳು ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ಸರಕಾರದೊಂದಿಗೆ ಸಮಾಲೋಚನೆ ನಡೆಸಿ, ನಿಯಮಾತ್ಮಕ ವ್ಯವಸ್ಥೆ ರೂಪಿಸಲು ಶಿಫಾರಸು ಮಾಡಲಾಗುವುದು” ಎಂದರು.
ಇನ್ನು ಮೃತಪಟ್ಟ ಜೀತ ವಿಮುಕ್ತರ ಕುಟುಂಬಗಳಿಗೆ ಸರ್ಕಾರದ ಸವಲತ್ತುಗಳನ್ನು ನೀಡಲು ನಿಯಮಾನುಸಾರ ಸಾಧ್ಯವಿಲ್ಲ. ರಾಜ್ಯದ ಕೆಲವೆಡೆ ಮಾನವೀಯತೆ ದೃಷ್ಟಿಯಿಂದ ಸಹಾಯ ಮಾಡಲಾಗಿದೆ, ಆದರೆ ಎಲ್ಲ ಸಂದರ್ಭಗಳಿಗೂ ಹೀಗೆ ಮಾಡಲಾಗದು ಎಂದು ಹೇಳಿದರು.
ಜೀತಕ್ಕೆ ಇಟ್ಟುಕೊಂಡವರ ವಿರುದ್ಧ ಎಫ್‌ಐಆರ್ ದಾಖಲಿಸುವ ಕಾನೂನನ್ನು ರದ್ದುಪಡಿಸುವ ಅಧಿಕಾರ ತಮಗೆ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು, “ಜೀತ ಮಾಲೀಕರ ವಿರುದ್ಧ ಕೇಸು ದಾಖಲಿಸುವುದರಿಂದ ಸಾಕಷ್ಟು ಪ್ರಕರಣಗಳು ಹಳ್ಳಹಿಡಿಯುತ್ತವೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ನನ್ನ ಹಂತದಲ್ಲಿ ಸಾಧ್ಯವಾದ ಮಟ್ಟಿಗೆ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುತ್ತೇನೆ” ಎಂದು ಭರವಸೆ ನೀಡಿದರು.
ಈ ವೇಳೆ ತಹಶೀಲ್ದಾರ್ ಬಿ.ಎನ್.ಸ್ವಾಮಿ, ಸರ್ಕಲ್ ಇನ್ಸ್‌ಪೆಕ್ಟರ್ ಎಂ.ಶ್ರೀನಿವಾಸ್, ಜೀವಿಕ ಸಂಘಟನೆಯ ತಾಲ್ಲೂಕು ಸಂಚಾಲಕ ಪಿ.ಶ್ರೀನಿವಾಸ್ ಉಪಸ್ಥಿತರಿದ್ದರು.