Byraganahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಬೈರಗಾನಹಳ್ಳಿಯ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ, ದಸಂಸ ಮುಖಂಡ 50 ವರ್ಷದ ನಾರಾಯಣಸ್ವಾಮಿಯನ್ನು ಗುರುವಾರ ರಾತ್ರಿ ಬರ್ಬರವಾಗಿ ಕೊಲೆ ಮಾಡಲಾಗಿದೆ.
ಶಿಡ್ಲಘಟ್ಟ-ದಿಬ್ಬೂರಹಳ್ಳಿ ಮುಖ್ಯ ರಸ್ತೆಯ ದ್ಯಾವಪ್ಪನಗುಡಿಯಿಂದ ಬೈರಗಾನಹಳ್ಳಿಗೆ ತಮ್ಮ ಓಮಿನಿ ವ್ಯಾನ್‌ನಲ್ಲಿ ತೆರಳುತ್ತಿದ್ದ ನಾರಾಯಣಸ್ವಾಮಿಯನ್ನು ಗುರುವಾರ ರಾತ್ರಿ ಅಡ್ಡಗಟ್ಟಿರುವ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಇದರಿಂದ ಬೈರಗಾನಹಳ್ಳಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಹೆಚ್ಚಿನ ಸಂಖ್ಯೆಯ ಪೊಲೀಸರು ಬೀಡು ಬಿಟ್ಟಿದ್ದು ಸಧ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿದೆ.
ಕೊಲೆಯಾದ ನಾರಾಯಣಸ್ವಾಮಿಯು ದಲಿತ ಸಂಘಟನೆಯಲ್ಲಿ ತೊಡಗಿದ್ದನಲ್ಲದೆ ಸಣ್ಣ ಪುಟ್ಟ ರಿಯಲ್ ಎಸ್ಟೇಟ್‌ನ ವ್ಯವಹಾರದಲ್ಲೂ ಭಾಗಿ ಆಗಿದ್ದ.
ಮೃತ ನಾರಾಯಣಸ್ವಾಮಿಯ ಸಂಬಂಧಿಕಳೊಬ್ಬಳೊಂದಿಗೆ ಅದೇ ಗ್ರಾಮದ ವ್ಯಕ್ತಿಯೊಬ್ಬ ವಿವಾಹೇತರ ಸಂಬಂಧ ಹೊಂದಿದ್ದು ಈ ಬಗ್ಗೆ ಆಕ್ಷೇಪವ್ಯಕ್ತಪಡಿಸಿದ್ದ ನಾರಾಯಣಸ್ವಾಮಿಯು ವಿವಾಹೇತರ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾದ ವ್ಯಕ್ತಿಗೆ ಬುದ್ದಿವಾದ ಹೇಳಿದ್ದ ಅಲ್ಲದೆ ನ್ಯಾಯ ಪಂಚಾಯಿತಿಗಳು ನಡೆಸಿ ದಿಬ್ಬೂರಹಳ್ಳಿ ಠಾಣೆಯಲ್ಲಿ ದೂರನ್ನು ಸಹ ದಾಖಲಿಸಲಾಗಿತ್ತು.
ಈ ವೇಳೆ ಪ್ರಮೋದ್ ಎಂಬಾತ ನಾರಾಯಣಸ್ವಾಮಿಗೆ ಪ್ರಾಣ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಈ ಬಗ್ಗೆ ನಾರಾಯಣಸ್ವಾಮಿಯು ತನಗೆ ಪ್ರಾಣ ಬೆದರಿಕೆ ಹಾಕಿದ ಪ್ರಮೋದ್ ಮೇಲೆ ದೂರನ್ನು ಸಹ ದಾಖಲಿಸಿದ್ದ. ಈ ಎಲ್ಲ ಹಳೆಯ ದ್ವೇಷಗಳ ಹಿನ್ನಲೆಯಲ್ಲಿ ನಾರಾಯಣಸ್ವಾಮಿಯ ಕೊಲೆ ಆಗಿದೆ ಎನ್ನಲಾಗಿದೆ.
ನಾರಾಯಣಸ್ವಾಮಿಯ ಪುತ್ರ ಗಗನ್ ನೀಡಿದ ದೂರಿನ ಮೇರೆಗೆ ಪ್ರಮೋದ್ ಮತ್ತು ಇತರರ ಮೇಲೆ ಕೊಲೆ ಮತ್ತು ಅಟ್ರಾಸಿಟಿ ಕೇಸನ್ನು ದಿಬ್ಬೂರಹಳ್ಳಿ ಠಾಣೆಯಲ್ಲಿ ದಾಖಲಿಸಲಾಗಿದೆ.
ಮೃತ ನಾರಾಯಣಸ್ವಾಮಿ ಕಡೆಯ ಗುಂಪಿನವರು ಪ್ರಮೋದ್ ಮತ್ತವರ ಕಡೆಯ ಮನೆಗಳ ಮೇಲೆ ಕಲ್ಲು ತೂರಿದ್ದು ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಎಎಸ್ಪಿ ಕುಶಾಲ್ ಚೌಕ್ಸೆ ಸೇರಿದಂತೆ ಹೆಚ್ಚಿನ ಸಂಖ್ಯೆಯ ಪೊಲೀಸರು, ಜಿಲ್ಲಾ ಶಸಸ್ತ್ರ ಮೀಸಲು ಪಡೆಯ ಪೊಲೀಸರು ಬೀಡು ಬಿಟ್ಟಿದ್ದು ಸಧ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿದೆ.