Chikkadasarahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಚಿಕ್ಕದಾಸರಹಳ್ಳಿಯಲ್ಲಿ ಅಣ್ಣ ತಮ್ಮಂದಿರ ನಡುವೆ ಜಮೀನಿನ ಭಾಗ ಪಡೆಯುವ ವಿಚಾರದಲ್ಲಿ ಹಲವು ವರ್ಷಗಳಿಂದಲೂ ನಡೆದುಕೊಂಡು ಬಂದಿದ್ದ ಗಲಾಟೆಯು ಅಂತಿಮವಾಗಿ ತಮ್ಮನು ಅಣ್ಣನನ್ನೇ ಕೊಲೆ ಮಾಡುವ ತನಕ ಮುಟ್ಟಿದೆ.
ಸೋಮವಾರ ಜಮೀನಿನ ವಿಚಾರವಾಗಿ ಅಣ್ಣ ತಮ್ಮಂದಿರ ನಡುವೆ ನಡೆದ ಗಲಾಟೆಯಲ್ಲಿ ತಮ್ಮನು ಚಾಕುವಿನಿಂದ ತಿವಿದು ಅಣ್ಣನನ್ನು ಕೊಲೆ ಮಾಡಿದ್ದಾನೆ.
ಐವತ್ತು ವರ್ಷದ ಮುನಿಯಪ್ಪ ಕೊಲೆಯಾದ ವ್ಯಕ್ತಿ. ಆತನ ಒಡ ಹುಟ್ಟಿದ ತಮ್ಮ ಬ್ಯಾಟರಾಯಪ್ಪನೇ ಕೊಲೆ ಮಾಡಿದ ವ್ಯಕ್ತಿ ಎನ್ನಲಾಗಿದೆ.
ಅಣ್ಣ ತಮ್ಮಂದಿರ ಕುಟುಂಬಗಳ ನಡುವೆ ಜಮೀನಿಗಾಗಿ ಆಗ್ಗಾಗ್ಗೆ ಮಾತಿನ ಚಕಮುಕಿ ಗಲಾಟೆ ನಡೆದುಕೊಂಡು ಬಂದಿದ್ದು ಪಂಚಾಯಿತಿ ರಾಜೀ ಮೂಲಕ ತಣ್ಣಗಾಗಿತ್ತು.
ಆದರೆ ಮುನಿಯಪ್ಪನ ಕುಟುಂಬದವರು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಬ್ಯಾಟರಾಯಪ್ಪ ಬಂದು ಅವರ ಕೆಲಸಕ್ಕೆ ಅಡ್ಡಿಪಡಿಸಿದ್ದು ಮಾತಿನ ಚಕಮುಕಿ ನಡೆದು ಜಗಳ ಶುರುವಾಗಿದೆ. ಆಗ ಅಲ್ಲಿಗೆ ಬಂದ ಮುನಿಯಪ್ಪ ಅವರು ಬ್ಯಾಟರಾಯಪ್ಪನನ್ನು ನಮ್ಮ ಮನೆಯವರ ಮೇಲೆ ಗಲಾಟೆ ಮಾಡುತ್ತಿರುವುದೇಕೆ ಎಂದು ಪ್ರಶ್ನಿಸಿದ್ದಾನೆ.
ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು ಬ್ಯಾಟರಾಯಪ್ಪನು ಚಾಕು ತೆಗೆದು ಮುನಿಯಪ್ಪನಿಗೆ ತಿವಿದೇ ಬಿಟ್ಟಿದ್ದಾನೆ. ಗಂಭೀರವಾಗಿ ಗಾಯಗೊಂಡ ಮುನಿಯಪ್ಪನನ್ನು ಶಿಡ್ಲಘಟ್ಟದ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದ್ದು ಹೆಚ್ಚಿನ ಚಿಕಿತ್ಸೆಗೆ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮದ್ಯೆ ಮುನಿಯಪ್ಪ ಕೊನೆ ಉಸಿರೆಳೆದಿದ್ದಾನೆ ಎನ್ನಲಾಗಿದೆ.
ಶಿಡ್ಲಘಟ್ಟ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.