Sidlaghatta : ಶಿಡ್ಲಘಟ್ಟ ನಗರದ ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ಬುಧವಾರ ರೇಷ್ಮೆ ಗೂಡಿನ ದರ ಇಳಿಕೆ ಆಗಿ ಬೆಳೆಗಾರರಿಗೆ ನಷ್ಟ ಆಗುತ್ತಿರುವ ಹಿನ್ನಲೆಯಲ್ಲಿ ಸುಮಾರು ಒಂದು ಗಂಟೆ ಕಾಲ ಗೂಡಿನ ಹರಾಜು ಸ್ಥಗಿತಗೊಳಿಸಿ, ರೇಷ್ಮೆಯ ಸಮಸ್ಯೆಗಳ ಬಗ್ಗೆ ರೈತರು ಮತ್ತು ರೀಲರುಗಳು ಪ್ರತಿಭಟನೆ ನಡೆಸಿದರು. ನಂತರ ಮನವಿ ಪತ್ರವನ್ನು ಸರ್ಕಾರಕ್ಕೆ ಉಪನಿರ್ದೇಶಕ ಅಮರನಾಥ್ ಅವರ ಮೂಲಕ ಸಲ್ಲಿಸಿದರು.
ರೇಷ್ಮೆ ಗೂಡಿಗೆ ಸರ್ಕಾರ ರಕ್ಷಣಾತ್ಮಕ ಬೆಲೆ ನಿಗದಿಪಡಿಸಿ ರೇಷ್ಮೆ ಬೆಳೆಗಾರರನ್ನು ಉಳಿಸಬೇಕು. ಕಚ್ಚಾರೇಷ್ಮೆಯನ್ನು ಸರ್ಕಾರ ಖರೀದಿಸಿ ನೂಲು ಬಿಚ್ಚಾಣಿಕೆದಾರರನ್ನು ಉಳಿಸಬೇಕು. ಈ ಮೂಲಕ ಅವಸಾನದ ಅಂಚಿಗೆ ತಲುಪಿರುವ ರಾಜ್ಯ ರೇಷ್ಮೆ ಇಲಾಖೆ ಮತ್ತು ಉದ್ದಿಮೆಯನ್ನು ಉಳಿಸಬೇಕು ಎಂದು ರೈತರು ಮತ್ತು ರೀಲರುಗಳು ಒತ್ತಾಯಿಸಿದರು.
ಕರ್ನಾಟಕ ರಾಜ್ಯದಲ್ಲಿ ಒಂದೂವರೆ ಲಕ್ಷ ಕುಟುಂಬಗಳಿಗೂ ಹೆಚ್ಚು ರೇಷ್ಮೆ ಬೆಳೆಗಾರರು ಹಾಗೂ ಹತ್ತು ಸಾವಿರ ಕುಟುಂಬಗಳಿಗೂ ಹೆಚ್ಚು ನೂಲು ಬಿಚ್ಚಾಣಿಕೆದಾರರು ಈ ರೇಷ್ಮೆ ಉದ್ದಿಮೆಯ ಬೆನ್ನೆಲುಬಾಗಿದ್ದಾರೆ ಮತ್ತು ಇದನ್ನೇ ನಂಬಿ ಬದುಕನ್ನು ಕಟ್ಟಿಕೊಂಡಿದ್ದಾರೆ. ಈಚೆಗೆ ರೇಷ್ಮೆ ಗೂಡಿನ ಉತ್ಪಾದನೆ ಕಷ್ಟಕರವಾಗಿದೆ. ಒಂದು ಕೇಜಿ ರೇಷ್ಮೆ ಗೂಡನ್ನು ಉತ್ಪಾದಿಸಲು ಕನಿಷ್ಟ 500 ರೂಗಳಿಗೂ ಹೆಚ್ಚು ಉತ್ಪಾದನಾ ವೆಚ್ಚ ತಗುಲುತ್ತದೆ. ಕಳೆದೆರಡು ವರ್ಷಗಳಿಂದ ಲಾಭದಾಯಿಕವಾಗಿ ಉದ್ದಿಮೆ ನಡೆಯುತ್ತಿತ್ತು. ಕಳೆದ ಮೂರು ತಿಂಗಳಿನಿಂದ ರೇಷ್ಮೆ ಗೂಡಿನ ಬೆಲೆ ತೀವ್ರ ಕುಸಿತವಾಗಿದೆ. 300-350 ರೂಗಳಿಗೆ ಮಾರಾಟ ಮಾಡಬೇಕಾದ್ದರಿಂದ ರೇಷ್ಮೆ ಬೆಳೆಗಾರರು ನಷ್ಟದಲ್ಲಿದ್ದಾರೆ.
ನೂಲು ಬಿಚ್ಚಾಣಿಕೆದಾರರು ಕೂಡ ನಷ್ಟದಲ್ಲಿದ್ದಾರೆ. ತಾವು ಉತ್ಪಾದಿಸಿರುವ ಕಚ್ಚಾ ರೇಷ್ಮೆಗೆ ಸೂಕ್ತ ಮಾರುಕಟ್ಟೆಯಿಲ್ಲದೆ, ಬೆಲೆಯಿಲ್ಲದೆ, ತಮ್ಮ ಕಸುಬಿಗೆ ವಿದಾಯ ಹೇಳುವ ಪರಿಸ್ಥಿತಿಯಲ್ಲಿದ್ದಾರೆ. ಇದರ ಜೊತೆಗೆ ಹಿಪ್ಪುನೇರಳೆ ತೋಟಗಳು ನುಸಿ ಪೀಡೆಯ ರೋಗದ ದಾಳಿಗೆ ತುತ್ತಾಗಿ ಅರ್ಧದಷ್ಟು ಬೆಳೆ ನಷ್ಟವಾಗಿದೆ. ಸರ್ಕಾರ ರೇಷ್ಮೆ ಉದ್ದಿಮೆಯನ್ನು ಉಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಒಂದು ಕೆ.ಜಿ.ಗೂಡಿಗೆ ಸರಾಸರಿ 500 ರೂಗಿಂತ ಬೆಲೆ ಕಡಿಮೆಯಾದಾಗ, ಒಂದು ಕೆಜಿ ಮಿಶ್ರತಳಿ ಗೂಡಿಗೆ ಸರ್ಕಾರ ಕನಿಷ್ಟ 100 ರೂ ಹಾಗೂ ದ್ವಿತಳಿ ಹೈಬ್ರಿಡ್ ಗೂಡಿಗೆ 150 ರೂ ಸಂಕಷ್ಟ ಪರಿಹರಣ ಧನವನ್ನು ತಕ್ಷಣ ಘೋಷಣೆ ಮಾಡಿ ನೀಡುವಂತಾಗಬೇಕು.
ಕರ್ನಾಟಕ ರೇಷ್ಮೆ ಮಾರಾಟ ಮಂಡಳಿಗೆ ಸರ್ಕಾರ ಈ ಕೂಡಲೇ ಕನಿಷ್ಠ 250 ಕೋಟಿ ರೂಗಳನ್ನು ತಕ್ಷಣ ಬಿಡುಗಡೆ ಮಾಡಿ ನೂಲು ಬಿಚ್ಚಾಣಿಕದಾರರಿಗೆ ರೇಷ್ಮೆ ಒತ್ತೆ ಸಾಲ ನೀಡಬೇಕು ಹಾಗೂ ಮಂಡಳಿಯು ಪ್ರತಿನಿತ್ಯ ನೂಲು ಬಿಚ್ಚಾಣಿಕೆದಾರರಿಂದ ಕಚ್ಚಾ ರೇಷ್ಮೆಯನ್ನು ನೇರ ಖರೀದಿ ಪ್ರಾರಂಭಿಸಬೇಕು.
ನುಸಿ ರೋಗ ತಡೆಯಲು ಸೂಕ್ತ ರೀತಿಯ ಕ್ರಮಗಳನ್ನು ಸಂಶೋಧಿಸಬೇಕು.
ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ಡಾ.ಸ್ವಾಮಿನಾಥನ್ ರವರ ವರದಿಯ ಪ್ರಕಾರ ಸರ್ಕಾರ ರೇಷ್ಮೆ ಗೂಡಿಗೆ ಕನಿಷ್ಟ ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂದು ವಿವಿಧ ಬೇಡಿಕೆಗಳನ್ನು ಮನವಿಯ ಮೂಲಕ ಸಲ್ಲಿಸಿದರು.
ರೇಷ್ಮೆ ಕೃಷಿ ಹಿತರಕ್ಷಣಾ ವೇದಿಕೆಯ ಮಳ್ಳೂರು ಶಿವಣ್ಣ, ಯಲುವಳ್ಳಿ ಸೊಣ್ಣೇಗೌಡ, ಹಿತ್ತಲಹಳ್ಳಿ ಸುರೇಶ್, ಕೃಷಿ ಪಂಡಿತ ಹಿತ್ತಲಹಳ್ಳಿ ಗೋಪಾಲಗೌಡ, ರೈತಸಂಘದ ಮುಖಂಡರುಗಳಾದ ಬೆಳ್ಳೂಟಿ ಮುನಿಕೆಂಪಣ್ಣ, ರವಿಪ್ರಕಾಶ್, ತಿಮ್ಮನಾಯಕನಹಳ್ಳಿ ಅರುಣ್ ಕುಮಾರ್, ಭಕ್ತರಹಳ್ಳಿ ಪ್ರತೀಶ್, ಅತ್ತಿಗಾನಹಳ್ಳಿ ಮುನೇಗೌಡ, ನವೀನ್ ಚಾರ್ಯ, ಭಕ್ತರಹಳ್ಳಿ ಕೊಟೆ ಚೆನ್ನೆಗೌಡ, ರೀಲರಗಳು ಹಾಜರಿದ್ದರು.