Sidlaghatta : ಶಿಡ್ಲಘಟ್ಟ ನಗರದ ಸರ್ಕಾರಿ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ e-Auction ಆರಂಭವಾಗಿ ಆರು ವರ್ಷಗಳು ಕಳೆದರೂ ಇಲ್ಲಿನ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇ ಹರಾಜು ಪ್ರಕ್ರಿಯೆಗಾಗಿ ಅಳವಡಿಸಿರುವ Wifi ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ ಎಂದು ರೀಲರ್ಸ್ ಅಸೊಸಿಯೇಷನ್ ಅಧ್ಯಕ್ಷ ಅನ್ಸರ್ ಖಾನ್ ಆರೋಪಿಸಿದರು.
ನಗರದ ಸರ್ಕಾರಿ ರೇಷ್ಮೆ ಗೂಡು ಮಾರುಕಟ್ಟೆ ಆವರಣದಲ್ಲಿ ಶುಕ್ರವಾರ ಶಿಡ್ಲಘಟ್ಟ ತಾಲ್ಲೂಕು ಸಿಲ್ಕ್ ರೀಲರ್ಸ್ ಅಸೋಸಿಯೇಷನ್ ಪದಾಧಿಕಾರಿಗಳು ಮಾರುಕಟ್ಟೆ ಅಧಿಕಾರಿಗಳ ಕಾರ್ಯವೈಖರಿ ಖಂಡಿಸಿ ಹಮ್ಮಿಕೊಂಡಿದ್ದ ಮುಷ್ಕರದ ನೇತೃತ್ವ ವಹಿಸಿ ಅವರು ಮಾತನಾಡಿದರು.
ಏಷ್ಯಾದಲ್ಲಿಯೇ ನಂಬರ್ 1 ಮಾರುಕಟ್ಟೆ ಎಂಬ ಖ್ಯಾತಿಯಿರುವ ನಗರದ ರೇಷ್ಮೆ ಗೂಡು ಮಾರುಕಟ್ಟೆಗೆ ಪ್ರತಿನಿತ್ಯ ಸಾವಿರಾರು ರೈತರು ಸೇರಿದಂತೆ ರೀಲರ್ ಗಳು ಬರುತ್ತಾರೆ. ಈ ಹಿಂದೆ ರೈತರು ಹಾಗೂ ರೀಲರ್ ಗಳ ನಡುವಿನ ನೇರ ಹರಾಜು ಪ್ರಕ್ರಿಯೆ ಜಾರಿಯಲ್ಲಿತ್ತು. ಕಳೆದ ಆರು ವರ್ಷಗಳ ಹಿಂದೆ ಸರ್ಕಾರ ಶುರುಮಾಡಿದ ಇ ಹರಾಜು ಪ್ರಕ್ರಿಯೆಯಲ್ಲಿ ದಿನಕ್ಕೊಂದು ಸಮಸ್ಯೆ ಕಂಡು ಬಂದಿತ್ತು. ದಿನ ಕಳೆದಂತೆ ಒಂದೊಂದು ಸಮಸ್ಯೆ ನಿವಾರಣೆಯಾಯಿತಾದರೂ ಇ ಹರಾಜು ನಡೆಯುವ ಸಮಯದಲ್ಲಿ ಉಂಟಾಗುವ ವೈ ಫೈ ಕಿರಿ ಕಿರಿ ಮಾತ್ರ ನಿಂತಿಲ್ಲ.
ರೈತರ ಗೂಡು ಖರೀದಿಸಿಲು ರೀಲರ್‌ಗಳು ಆನ್ ಲೈನ್ ಮುಖಾಂತರ ಬಿಡ್ ದಾಖಲಿಸಿ ಇನ್ನೇನು ರೀಲರ್‌ಗಳಿಗೆ ಗೂಡು ಸಿಗುತ್ತದೆ ಎನ್ನುವ ಅಂತಿಮ ಕ್ಷಣಗಳಲ್ಲಿ ವೈ ಫೈ ತೊಂದರೆ ನೀಡುವುದರಿಂದ ರೀಲರ್‌ಗಳಿಗೆ ಗೂಡು ಸಿಗುತ್ತಿಲ್ಲ. ಇದರಿಂದ ಮಾರುಕಟ್ಟೆಗೆ ಬರುವ ಬಹುತೇಕ ರೀಲರ್‌ಗಳು ಗೂಡು ಸಿಗದೇ ಖಾಲಿ ಕೈಯ್ಯಲ್ಲಿ ವಾಪಸ್ ಮರಳಬೇಕಿದೆ. ಈ ಬಗ್ಗೆ ಹಲವಾರು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಕೂಡಲೇ ಮಾರುಕಟ್ಟೆಯಲ್ಲಿ ಅಳವಡಿಸಿರುವ ಇ ಹರಾಜು ಪ್ರಕ್ರಿಯೆ ಕೈ ಬಿಡಬೇಕು ಎಂದು ಒತ್ತಾಯಿಸಿದರು.
ಮುಷ್ಕರ ನಿರತ ರೀಲರ್ ಗಳನ್ನುದ್ದೇಶಿಸಿ ರೇಷ್ಮೆ ಗೂಡು ಮಾರುಕಟ್ಟೆ ಉಪ ನಿರ್ದೇಶಕ ಅಮರ್‌ನಾಥ್ ಮಾತನಾಡಿ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಕಳೆದ ಕೆಲ ದಿನಗಳಿಂದ ಉಂಟಾಗಿರುವ ವೈ ಫೈ ಸಮಸ್ಯೆಯ ಬಗ್ಗೆ ಇ ಹರಾಜು ತಂತ್ರಜ್ಞರೊಂದಿಗೆ ಮಾತು ಕತೆ ನಡೆಸಿದ್ದು ಮುಂದಿನ ಹದಿನೈದು ದಿನಗಳೊಳಗೆ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ಹಾಗಾಗಿ ರೀಲರ್ ಗಳು ಮುಷ್ಕರ ವಾಪಸ್ ಪಡೆದು ಎಂದಿನಂತೆ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದ ನಂತರ ರೀಲರ್‌ಗಳ ಮುಷ್ಕರ ಕೈ ಬಿಡಲಾಯಿತು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಆನಂದಕುಮಾರ್, ಖಜಾಂಚಿ ಕೆ.ಬಿ.ಮಂಜುನಾಥ್, ಕಾರ್ಯದರ್ಶಿ ಸಾಧಿಕ್‌ಪಾಷ, ರೀಲರ್ ಮುಖಂಡರಾದ ಅನ್ವರ್‌ಸಾಬ್, ರೆಹಮಾನ್ ಸಾಬ್, ರಾಮಕೃಷ್ಣಪ್ಪ, ಮುತ್ತೂಸ್, ನವೀದ್, ಮುನಿಕೃಷ್ಣ, ಅತೀಕ್ ಹಾಜರಿದ್ದರು.