
Sidlaghatta : ಶಿಡ್ಲಘಟ್ಟ ನಗರದ ದಿಬ್ಬೂರಹಳ್ಳಿ ಮಾರ್ಗದಲ್ಲಿನ ಹಿರಿಯ ಸಿವಿಲ್ ನ್ಯಾಯಾಲಯ, ಪ್ರಧಾನ ಸಿವಿಲ್ ನ್ಯಾಯಾಲಯ ಹಾಗೂ ಅಪರ ಸಿವಿಲ್ ನ್ಯಾಯಾಲಯಗಳಲ್ಲಿ ಶನಿವಾರ ಲೋಕ ಅದಾಲತ್ ನಡೆಯಿತು.
ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ರೋಷನ್ ಷಾ ಅವರು ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಹಾಡು ವಾಚಿಸಿ, ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನ್ಯಾಯಾಲಯದಲ್ಲಿ ಕಕ್ಷಿದಾರರು ಹಾಗೂ ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ತಮ್ಮ ಪ್ರಕರಣಗಳನ್ನು ರಾಜಿ ಮಾಡಿಕೊಂಡರೆ ಪರಸ್ಪರ ವೈಷಮ್ಯ ಕಡಿಮೆಯಾಗುವ ಜೊತೆಗೆ ಉತ್ತಮ ಬಾಂಧವ್ಯ ಬೆಳೆಯಲು ಸಾಧ್ಯ. ಇದರಿಂದ ನೆಮ್ಮದಿ ಹಾಗೂ ಶಾಂತಿಯುತ ಬದುಕು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಅನೇಕ ಮಂದಿ ನ್ಯಾಯ ಪಡೆಯಲು ವರ್ಷಗಟ್ಟಲೆ ಹೋರಾಡಿ ಹಣ, ಸಮಯ ಹಾಗೂ ಶ್ರಮ ವ್ಯಯಿಸುತ್ತಾರೆ. ಇದರಿಂದ ಕುಟುಂಬದ ಆರ್ಥಿಕ ಸ್ಥಿತಿ ಹದಗೆಡಲು ಜೊತೆಗೆ, ಕೆಲಸ ಕಾರ್ಯಗಳಿಗೂ ಅಡಚಣೆ ಉಂಟಾಗುತ್ತದೆ. ನ್ಯಾಯ ಸಿಗಲು ವಿಳಂಬವಾಗುವ ಜೊತೆಗೆ, ತೀರ್ಪು ಕೂಡ ಪ್ರತೀಕ್ಷೆಯಂತೆ ಇರುವ ಖಚಿತತೆ ಇರುವುದಿಲ್ಲ. ಇದು ಮಾನಸಿಕ ಒತ್ತಡ ಹಾಗೂ ನಿರಾಶೆಗೆ ಕಾರಣವಾಗಬಹುದು ಎಂದು ಅವರು ಹೇಳಿದರು.
ಅನೇಕ ಪ್ರಕರಣಗಳಲ್ಲಿ ಆಸ್ತಿ ಕುರಿತ ಕುಟುಂಬ ಕಲಹಗಳ ರಾಜಿ ಸಾಧಿಸಿ, ಪರಸ್ಪರ ವೈಮನಸ್ಸು ದೂರಮಾಡಲಾಗಿದ್ದು, ಈ ಮೂಲಕ ಹಣದ ಉಳಿತಾಯ ಹಾಗೂ ಸುಖಮಯ ಜೀವನಕ್ಕೆ ಮಾರ್ಗ ಸಿಕ್ಕಿದೆ ಎಂಬುದು ಸಂತಸದ ಸಂಗತಿ ಎಂದರು.
ಈ ದಿನದ ಲೋಕ ಅದಾಲತ್‌ನಲ್ಲಿ ಶಿಡ್ಲಘಟ್ಟ ನ್ಯಾಯಾಲಯದಲ್ಲಿ ಒಟ್ಟು 593 ಪ್ರಕರಣಗಳಲ್ಲಿ 406 ಪ್ರಕರಣಗಳು ಇತ್ಯರ್ಥಗೊಂಡು, ₹1,55,99,613 ರೂ. ಸಂಗ್ರಹವಾಗಿದೆ. ಇದೇ ಸಂದರ್ಭದಲ್ಲಿ 92 ಜನರಿಗೆ ಜನನ ಪ್ರಮಾಣಪತ್ರ ವಿತರಿಸಲಾಯಿತು.
ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ನ್ಯಾಯಾಧೀಶೆ ಜೆ.ಪೂಜಾ ನೇತೃತ್ವದಲ್ಲಿ ಹಲವಾರು ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡವು. ವಕೀಲರಾದ ಎಸ್.ಕೆ.ನಾಗರಾಜ್, ಬಿ.ಕೆ.ವೆಂಕಟೇಶ್ ಸಂಧಾನಕಾರರಾಗಿ ಕಾರ್ಯನಿರ್ವಹಿಸಿದರು.
ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ, ಕಾರ್ಯದರ್ಶಿ ಸಿ.ಜಿ.ಭಾಸ್ಕರ್ ಸೇರಿದಂತೆ ಅನೇಕರು ಹಾಜರಿದ್ದರು.