Sidlaghatta : DAP ಗೊಬ್ಬರ ರೈತರಿಗೆ ಅಗತ್ಯಕ್ಕೆ ತಕ್ಕಂತೆ ಸಿಗದೇ ತೀವ್ರ ಕೊರತೆ (Scarcity) ಎದುರಾಗಿರುವ ಸಂಗತಿಯು ರೈತರ (Farmers) ಆಕ್ರೋಶಕ್ಕೆ ಕಾರಣವಾಗಿದೆ. ತಾಲ್ಲೂಕಿನಾದ್ಯಂತ ಉತ್ತಮ ಮಳೆ ಆಗುತ್ತಿದ್ದು ಕೆಲವು ಕಡೆ ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಆದರೆ ಡಿಎಪಿ ಗೊಬ್ಬರವು ರೈತರ ಬೇಡಿಕೆಗೆ ಅನುಗುಣವಾಗಿ ಕಾಲಕಾಲಕ್ಕೆ ಪೂರೈಕೆ ಆಗದೇ ಇರುವುದು ಎದ್ದು ಕಾಣುತ್ತಿದೆ.
ಡಿಎಪಿ ಆರೋಗ್ಯಕರ ಸಸ್ಯ ಬೆಳವಣಿಗೆಗೆ ಅಗತ್ಯವಿರುವ ಎರಡು ಪ್ರಾಥಮಿಕ ಪೋಷಕಾಂಶಗಳಾದ ಸಾರಜನಕ ಮತ್ತು ರಂಜಕಗಳನ್ನು ಒಳಗೊಂಡಿರುವ ಖನಿಜಾಂಶಗಳ ಮಿಶ್ರಣ. ತಾಲ್ಲೂಕಿನ ಬಹುತೇಕ ಕಡೆ ಮಳೆ ಧಾರಾಕಾರವಾಗಿ ಸುರಿದಿದೆ. ಈಗ ರಸಗೊಬ್ಬರಗಳ ಅಗತ್ಯತೆಯೂ ಹೆಚ್ಚಾಗಿದೆ. ಆದರೆ ಡಿಎಪಿ ಮತ್ತು ಯೂರಿಯಾ ಕೊರತೆ ಕಾಣಿಸಿಕೊಂಡಿದೆ.
ಕೇಂದ್ರ ಸರ್ಕಾರ ಡಿಎಪಿ ಬೆಲೆಯನ್ನು ಏರಿಸಿದಾಗ ದೊಡ್ಡ ಮಟ್ಟದ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಡಿಎಪಿ ಬೆಲೆಯನ್ನು 1,200 ರೂ.ಗೆ ಇಳಿಸಿ ರಸಗೊಬ್ಬರ ಉತ್ಪಾದನಾ ಕಂಪನಿಗಳಿಗೆ ಸಬ್ಸಿಡಿ ಹಣ ನೀಡುವುದಾಗಿ ಹೇಳಿತ್ತು. ಇದೇ ಕಾರಣಕ್ಕೆ ಈಗ ಕಂಪನಿಗಳು ಹೆಚ್ಚಾಗಿ ಡಿಎಪಿಯನ್ನು ಉತ್ಪಾದಿಸದೆ ಪೂರೈಕೆಯನ್ನು ಕಡಿಮೆ ಮಾಡಿದೆ ಎಂಬ ಆರೋಪವಿದೆ. ಈಗಲೂ ರೈತರು ಬಹುತೇಕ ಕಡೆ ಡಿಎಪಿಗಾಗಿ ಸಾಲುಗಟ್ಟಿ ನಿಲ್ಲುವ ಸ್ಥಿತಿಯಿದೆ.
“ಈಗ ಹೊಲ ಬಿತ್ತನೆ ಮಾಡುವ ಕಾಲ. ಈಗ ನಮಗೆಲ್ಲರಿಗೂ ಡಿಎಪಿ ಅತ್ಯಗತ್ಯ. ಆದರೆ ಸಿಗುತ್ತಿಲ್ಲ. ಕೆಲವರು 20-20 ಗೊಬ್ಬರ ಕೊಂಡು ತಂದು ಬಿತ್ತನೆ ಕಾರ್ಯ ಮಾಡಿದವರಿದ್ದಾರೆ. ಕಳೆದ ಒಂದು ತಿಂಗಳಿನಿಂದಲೂ ಡಿಎಪಿ ಗೊಬ್ಬರಕ್ಕೆ ತೀವ್ರ ಕೊರತೆಯಿದೆ. ಅಲ್ಪ ಸ್ವಲ್ಪ ಬಂದರೂ ಒಂದೆರಡು ಗಂಟೆಗಳಲ್ಲಿ ಖಾಲಿಯಾಗಿಬಿಡುತ್ತದೆ. ಬಿತ್ತನೆ ಕಾರ್ಯಕ್ಕೆ ಡಿಎಪಿ ಸಿಗದಂತಾಗಿದೆ” ಎನ್ನುತ್ತಾರೆ ರೈತ ರಂಜಿತ್