
Sidlaghatta : ಶಿಡ್ಲಘಟ್ಟ ದಿಬ್ಬೂರಹಳ್ಳಿ ಬೈಪಾಸ್‌ನ ಪೂಜಮ್ಮ ದೇವಾಲಯದಲ್ಲಿ ಮಂಗಳವಾರ “ದಶರತಿ” ಚಲನಚಿತ್ರದ ಚಿತ್ರೀಕರಣಕ್ಕೆ ಶುಭಾರಂಭ ನೀಡಲಾಯಿತು. ನಟ ಸೋಹನ್ ಅಭಿರಾಮ್ ಮುಖ್ಯಪಾತ್ರದಲ್ಲಿ ನಟಿಸುತ್ತಿರುವ ಈ ಚಿತ್ರ ಒಂದು ಸಾರ್ಥಕ ಸಮಾಜ ಸಂದೇಶವನ್ನು ನೀಡುವಂತಾಗಲಿ ಎಂದು ಪ್ರಾರ್ಥನೆ ಸಲ್ಲಿಸಲಾಯಿತು.
ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ಮಾತನಾಡಿ, “ಸೋಹನ್ ಅಭಿರಾಮ್ ಒಂದು ಸಣ್ಣ ಹಳ್ಳಿಯಲ್ಲಿ ಹುಟ್ಟಿ, ನಟನೆಯ ತರಬೇತಿ ಪಡೆದು ಇಂದು ಚಿತ್ರದ ನಾಯಕನಾಗಿರುವುದು ಹೆಮ್ಮೆ ಮೂಡಿಸುತ್ತದೆ. ಚಿತ್ರ ಯಶಸ್ಸು ಕಾಣಲಿ, ಸಮಾಜಕ್ಕೆ ಉತ್ತಮ ಸಂದೇಶವನ್ನು ಒಯ್ಯಲಿ” ಎಂದು ಹಾರೈಸಿದರು.
ಪೂಜಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಮಹಾ ಮಂಗಳಾರತಿ ನಂತರ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು. ಚಿತ್ರದ ಸುಗಮ ಚಿತ್ರೀಕರಣಕ್ಕಾಗಿ ತಾಯಿಯ ಆಶೀರ್ವಾದ ಕೋರಿದ ನಾಯಕ ನಟ ಸೋಹನ್ ಅಭಿರಾಮ್, ದೇವಾಲಯದ ಮುಂದೆ ಕೈ ಮುಗಿದು ಪ್ರಾರ್ಥನೆ ಸಲ್ಲಿಸಿದ ದೃಶ್ಯವನ್ನು ಚಿತ್ರೀಕರಿಸಲಾಯಿತು.
ಚಿತ್ರದ ನಿರ್ಮಾಪಕಿ ಎಸ್.ಎನ್. ಮಾಲ, ನಿರ್ದೇಶಕ ವೇಕ್ ವೀರ, ಬಿಜೆಪಿ ಮುಖಂಡ ಸೀಕಲ್ ಆನಂದಗೌಡ, ನಗರಸಭೆ ಸದಸ್ಯರಾದ ಅನಿಲ್ ಕುಮಾರ್, ನಾರಾಯಣಸ್ವಾಮಿ, ಫುಡ್ ಮನೋಹರ್, ಸುರೇಂದ್ರಗೌಡ, ಚಿಕ್ಕಮುನಿಯಪ್ಪ, ಮಧು, ಅರುಣ್ ಕುಮಾರ್, ಜ್ಞಾನೇಶ್, ಭಗತ್ ಸುರೇಶ್, ಅಜ್ಜಪ್ಪ, ರಾಮಚಂದ್ರಪ್ಪ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.