Sidlaghatta : ಡೆಂಗ್ಯೂ ಎಂಬುದು ಮಾರಣಾಂತಿಕ ಖಾಯಿಲೆಯಾಗಿರುವುದರಿಂದ ಪ್ರತಿಯೊಬ್ಬರೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಹಶೀಲ್ದಾರ್ ಬಿ.ಎನ್.ಸ್ವಾಮಿ ತಿಳಿಸಿದರು.
ಶಿಡ್ಲಘಟ್ಟ ನಗರದ ನಗರಸಭೆ ಮುಂಭಾಗ ಶುಕ್ರವಾರ ಡೆಂಗ್ಯೂ ಜ್ವರ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ಲಾರ್ವ ನಾಶ ಸರ್ವೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ವಿಷಯದಲ್ಲಿ ಪೌರಕಾರ್ಮಿಕರ ಸೇವೆ ಅಮೂಲ್ಯವಾದದ್ದು, ಸೊಳ್ಳೆಗಳ ಲಾರ್ವ ಉತ್ಪತ್ತಿ ತಡೆಯುವ ಮೂಲಕ ಡೆಂಗ್ಯೂ ಹರಡದಂತೆ ಹಾಗೂ ಮನುಷ್ಯರ ಪ್ರಾಣ ಉಳಿಸುವ ಕೆಲಸ ಮಾಡಬೇಕಿದೆ. ವಾರ್ಡ್ ಗಳಲ್ಲಿ ಪ್ರತಿ ದಿನ ಟೈರುಗಳು, ತೆಂಗಿನ ಚುಪ್ಪು, ಘನ ತ್ಯಾಜ್ಯಗಳಾದ ಪ್ಲಾಸ್ಟಿಕ್ ಬಾಟಲ್, ಮಡಿಕೆಗಳು ಇತರೆ ಎಲ್ಲಾ ವಸ್ತುಗಳನ್ನು ವಿಲೇವಾರಿ ಮಾಡಬೇಕು. ಸಾರ್ವಜನಿಕರಿಗೆ ಆರೋಗ್ಯ ಶಿಕ್ಷಣ ನೀಡುವಂತೆ ಮತ್ತು ಲಾರ್ವ ಸಮೀಕ್ಷೆ ಕಾರ್ಯದಲ್ಲಿ ಪ್ರತಿ ಶುಕ್ರವಾರ ಪೌರಕಾರ್ಮಿಕರೆಲ್ಲರೂ ಭಾಗವಹಿಸುವಂತೆ ತಿಳಿ ಹೇಳಿದರು.
ನಾವು ವಾಸಿಸುವ ಮನೆಯ ನೆರೆಹೊರೆಯಲ್ಲಿ ಖಾಲಿ ತೆಂಗಿನಕಾಯಿ ಚಿಪ್ಪು, ಹಳೆಯ ಟೈರು, ಹೂವಿನ ಕುಂಡ, ಪ್ಲಾಸ್ಟಿಕ್ ಕವರ್‌ನಂತಹ ವಸ್ತುಗಳಲ್ಲಿ ಹೆಚ್ಚು ದಿನಗಳ ಕಾಲ ನೀರು ನಿಲ್ಲುವುದರಿಂದ ಸೊಳ್ಳೆಗಳ ಸಂತಾನ ವೃದ್ಧಿಯಾಗದಂತೆ ನೋಡಿಕೊಳ್ಳುವುದು ಅಗತ್ಯ. ಸೊಳ್ಳೆಗಳ ಲಾರ್ವಾಗಳು ಉತ್ಪತ್ತಿಯಾಗುವ ಲಕ್ಷಣಗಳಿದ್ದಲ್ಲಿ ಸೊಳ್ಳೆಗಳನ್ನು ತಿನ್ನಬಲ್ಲ ಗಪ್ಪಿ ಪ್ರಭೇದದ ಮೀನುಗಳನ್ನು ನೀರಿನಲ್ಲಿ ಬಿಡಬೇಕು. ಡೆಂಗ್ಯು ತಡೆಗಟ್ಟುವಲ್ಲಿ ಸಾರ್ವಜನಿಕರ ಪಾತ್ರ ಮಹತ್ವದ್ದು ಎಂದರು.
ತಾಲ್ಲೂಕು ಪಂಚಾಯಿತಿ ಇಒ ಎಸ್.ನಾರಾಯಣ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರಕುಮಾರ್, ಪೌರಾಯುಕ್ತ ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆಯ ಜಗದೀಶ್, ಆರೋಗ್ಯ ಇಲಾಖೆಯ ಸಿಬ್ಬಂದಿ, ನಗರಸಭೆಯ ಸಿಬ್ಬಂದಿ ಹಾಗೂ ಪೌರನೌಕರರು ಹಾಜರಿದ್ದರು.