
Devaramallur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ದೇವರ ಮಳ್ಳೂರು ಗ್ರಾಮದಲ್ಲಿ ಭಾನುವಾರ ರಾತ್ರಿ ಗ್ರಾಮಸ್ಥರು ಹಾಗೂ ಕಲಾಭಿಮಾನಿಗಳ ಸಮ್ಮುಖದಲ್ಲಿ ಕಾಮಣ್ಣನ ದಿನಾಚರಣೆ ಉತ್ಸವಮಯವಾಗಿ ನಡೆಯಿತು.
ಕಲೆ ಮತ್ತು ಸಂಸ್ಕೃತಿಗಳ ತವರೂರಾಗಿ ಗುರುತಿಸಿಕೊಂಡಿರುವ ಈ ಗ್ರಾಮದಲ್ಲಿ, ಪ್ರತೀ ವರ್ಷದಂತೆ ಈ ಬಾರಿಯೂ ಉತ್ಸವ ವಿಶಿಷ್ಟವಾಗಿ ಆಚರಿಸಲಾಯಿತು. ಮಕ್ಕಳು ಹಾಗೂ ಕೆಲ ಹಿರಿಯರು ವಿಭಿನ್ನ ವೇಷ ಭೂಷಣಗಳಲ್ಲಿ ಮಿಂಚುತ್ತಾ, ಕಲಾ ಪ್ರದರ್ಶನ ನೀಡಿ ಗ್ರಾಮಸ್ಥರು ಹಾಗೂ ಕಲಾಭಿಮಾನಿಗಳನ್ನು ಸಂತೋಷಿಸಿದರು.
ಈ ವೇಳೆ ಮಾತನಾಡಿದ ಹಿರಿಯ ಮುಖಂಡ ಬಚ್ಚಣ್ಣ, “ನಮ್ಮ ಗ್ರಾಮವು ಶತಮಾನಗಳ ಹಿಂದಿನಿಂದಲೇ ಕಲಾ ಸಂಸ್ಕೃತಿಗೆ ಹೆಸರುವಾಸಿಯಾಗಿದೆ. ಹಿರಿಯರ ಸಂಪ್ರದಾಯವನ್ನು ಮುಂದುವರಿಸುತ್ತಾ, ಕಾಮಣ್ಣನ ದಿನಾಚರಣೆ ಸಾಂಪ್ರದಾಯಿಕ ಮತ್ತು ವೈವಿಧ್ಯಮಯ ಕಲಾ ಪ್ರದರ್ಶನಗಳ ಮೂಲಕ ಸಂಭ್ರಮದಿಂದ ಜರುಗುತ್ತಿದೆ. ಕರಗ ಕುಣಿತ, ಪೋಟಿ ವೇಷ, ಕರಡಿ ಕುಣಿತ ಹಾಗೂ ಪುಟ್ಟ ಮಕ್ಕಳ ವೈವಿಧ್ಯಮಯ ವೇಷಭೂಷಣಗಳು ಗ್ರಾಮಸ್ಥರಿಗೆ ಹಾಗೂ ಕಲಾಭಿಮಾನಿಗಳಿಗೆ ಅಪಾರ ಸಂತೋಷ ತಂದಿವೆ” ಎಂದು ಹೇಳಿದರು.
ಕಾರ್ಯಕ್ರಮದ ಅಂಗವಾಗಿ ವಿಭಿನ್ನ ವೇಷಧಾರಿಗಳಿಗೆ ಬಹುಮಾನ ವಿತರಿಸಲಾಯಿತು. ಬಳಿಕ ಗ್ರಾಮಸ್ಥರ ಸಹಭಾಗಿತ್ವದಲ್ಲಿ ಭಜನೆ ಕಾರ್ಯಕ್ರಮ ನಡೆಯಿತು. ಉತ್ಸವದಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಸಾದ ವಿತರಣೆಯಾಗಿದ್ದು, ಉತ್ಸವವು ಹರ್ಷೋಲ್ಲಾಸದಿಂದ ನೆರವೇರಿತು.