Sidlaghatta : ನಗರದ ಆಶಾಕಿರಣ ಅಂಧ ಮಕ್ಕಳ ಶಾಲೆಯಲ್ಲಿ ಗುರುವಾರ Indian Medical Association ವತಿಯಿಂದ ಆಯೋಜಿಸಿದ್ದ “ವೈದ್ಯರ ದಿನಾಚರಣೆ” (National Doctors’ Day) ಕಾರ್ಯಕ್ರಮದಲ್ಲಿ IMA ತಾಲ್ಲೂಕು ಅಧ್ಯಕ್ಷ ಡಾ.ಡಿ.ಟಿ.ಸತ್ಯನಾರಾಯಣರಾವ್ ಅವರು ಮಾತನಾಡಿದರು.
ಮನುಷ್ಯನಿಗೆ ಒಂದಲ್ಲ ಒಂದು ಕಾರಣಕ್ಕೆ ಅನಾರೋಗ್ಯ ಅಥವಾ ಆರೋಗ್ಯಕ್ಕೆ ಸಂಬಂಧಿಸಿದ ತೊಂದರೆಗಳು ಉಂಟಾಗುವುದು ಸಹಜ. ಅದಕ್ಕೆ ಸರಿಯಾದ ಚಿಕಿತ್ಸೆ ಹಾಗೂ ಆರೈಕೆಯ ಕ್ರಮ ಕೈಗೊಂಡಾಗ ವಾಸಿಯಾಗುವುದು. ಅಂತಹ ಒಂದು ಉತ್ತಮ ಆರೋಗ್ಯ ತಪಾಸಣೆ ಹಾಗೂ ಸಲಹೆಯನ್ನು ವೈದ್ಯರಿಂದ ಪಡೆದುಕೊಳ್ಳಬೇಕು. ಆಗಲೇ ನಮ್ಮ ಆರೋಗ್ಯ ಉತ್ತಮವಾಗಿರಲು ಸಾಧ್ಯ. ನಮ್ಮ ಶರೀರಕ್ಕೆ ಯಾವುದೇ ಅನಾರೋಗ್ಯ ಆವರಿಸಿಕೊಂಡರೂ ಅದನ್ನು ಬಹು ಬೇಗ ಗುಣಮುಖ ಮಾಡುವ ಸಾಮರ್ಥ್ಯ ಇರುವುದು ವೈದ್ಯರಲ್ಲಿ ಎಂದು ತಿಳಿಸಿದರು.
ಸಮಾಜದಲ್ಲಿ ವೈದ್ಯರ ಪಾತ್ರ, ಅವರ ಪ್ರಾಮುಖ್ಯತೆ ಮತ್ತು ಜವಾಬ್ದಾರಿಗಳು ಅತ್ಯಂತ ಮಹತ್ವ ಪಡೆದುಕೊಂಡಿರುತ್ತದೆ. ವೈದ್ಯರ ಕೆಲಸ ಪ್ರವೃತ್ತಿ, ಜವಾಬ್ದಾರಿ ಹಾಗೂ ಪ್ರಾಮುಖ್ಯತೆಯ ಬಗ್ಗೆ ಜನರಲ್ಲಿ ಅರಿವನ್ನು ಮೂಡಿಸುವ ಉದ್ದೇಶದಿಂದ ಭಾರತದಲ್ಲಿ ರಾಷ್ಟ್ರೀಯ ವೈದ್ಯರ ದಿನವನ್ನು ಪ್ರತಿವರ್ಷ ಜುಲೈ 1ರಂದು ಆಚರಿಸಲಾಗುತ್ತದೆ ಎಂದರು.
ತಾಲ್ಲೂಕು ವೈದ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿ, ಜುಲೈ ಒಂದನೇ ತಾರೀಕು ಆಧುನಿಕ ಭಾರತದ ವೈದ್ಯಲೋಕದ ಧನ್ವಂತ್ರಿ ಎಂದೇ ಕರೆಯಲ್ಪಡುವ ಭಾರತರತ್ನ ಡಾ.ಬಿ.ಸಿ. ರಾಯ್ ಅವರ ಜನ್ಮದಿನ. ಇವರು ವೈದ್ಯರಾಗಿ ಮಾಡಿದ ಸಾಧನೆ ನೆನಪಿಸಿಕೊಳ್ಳಲು ಮತ್ತು ಈ ಮೂಲಕ ಇಡಿ ವೈದ್ಯ ಸಮುದಾಯದ ಸೇವೆಯನ್ನು ಸ್ಮರಿಸಿ ಗೌರವಿಸುವ ಉದ್ದೇಶದಿಂದ ವೈದ್ಯರ ದಿನವನ್ನು ಆಚರಿಸಲಾಗುತ್ತದೆ. ಅವರ ಗಣನೀಯ ಸೇವೆಯನ್ನು ಪರಿಗಣಿಸಿ 1961 ರ ಫೆಬ್ರವರಿ 4ರಂದು ಕೇಂದ್ರ ಸರ್ಕಾರ ಭಾರತ ರತ್ನ ಪ್ರಶಸ್ತಿ ನೀಡಿತ್ತು. ಕುತೂಹಲಕರ ವಿಚಾರವೆಂದರೆ ಅವರು ಜನಿಸಿದ್ದು 1882, ಜು.1. ತೀರಿಕೊಂಡಿದ್ದು, 1962 ಜುಲೈ.1. ಅವರು ಜನಿಸಿದ ದಿನ ಮತ್ತು ತೀರಿಕೊಂಡ ದಿನ ಒಂದೇ ಆಗಿದೆ ಎಂದು ವಿವರಿಸಿದರು.
ಐ.ಎಂ.ಎ. ವತಿಯಿಂದ ಆಶಾಕಿರಣ ಅಂಧ ಮಕ್ಕಳ ಶಾಲೆಯಲ್ಲಿನ ಮಕ್ಕಳಿಗೆಲ್ಲಾ ಭೋಜನವನ್ನು ಏರ್ಪಡಿಸಲಾಗಿತ್ತು.
ಐ.ಎಂ.ಎ. ತಾಲ್ಲೂಕು ಕಾರ್ಯದರ್ಶಿ ಡಾ.ಅಲ್ತಾಫ್ ಅಹಮದ್, ಸರ್ಕಾರಿ ಆಸ್ಪತ್ರೆಯ ಆರೋಗ್ಯ ನಿರೀಕ್ಷಕ ದೇವರಾಜ್ ಹಾಜರಿದ್ದರು.