Sidlaghatta : ಶಿಡ್ಲಘಟ್ಟ ತಾಲ್ಲೂಕಿನ ವರದನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಇಂಡಿಯಾ ಲಿಟ್ರಸಿ ಪ್ರಾಜೆಕ್ಟ್ ಮತ್ತು ಚೈಲ್ಡ್ ರೈಟ್ಸ್ ಟ್ರಸ್ಟ್ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಶಿಡ್ಲಘಟ್ಟ ತಾಲ್ಲೂಕಿನ ಶಿಕ್ಷಣ ಇಲಾಖೆಯ ಸಹಕಾರದೊಂದಿಗೆ ಆಯೋಜಿಸಿದ್ದ ಬಹುವಿಧ ಆಯಾಮಗಳ ಕಲಿಕಾ ಕಾರ್ಯಕ್ರಮವನ್ನು ಉದ್ಘಾಟಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಅಂಜನೇಯ ಮಾತನಾಡಿದರು.
1 ರಿಂದ 10ನೇ ತರಗತಿಯ ಮಕ್ಕಳಿಗೆ ಭಾಷೆಗಳು, ವಿಜ್ಞಾನ, ಸಮಾಜ ವಿಜ್ಞಾನ ಹಾಗೂ ಗಣಿತ ವಿಷಯಗಳಿಗೆ ಸಂಬಂಧಿಸಿದಂತೆ ಮಕ್ಕಳಲ್ಲಿ ಕಲಿಕಾ ಮಟ್ಟವನ್ನು ಅಭಿವೃದ್ಧಿ ಪಡಿಸುವ ಕಾರ್ಯಕ್ರಮವಿದು. ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳ ಸಹಭಾಗಿತ್ವದಲ್ಲಿ ಚೈಲ್ಡ್ ರೈಟ್ಸ್ ಟ್ರಸ್ಟ್ ಹಾಗೂ ಇಂಡಿಯಾ ಲಿಟ್ರಸಿ ಪ್ರಾಜೆಕ್ಟ್ ಸಂಸ್ಥೆಗಳ ಬಹುವಿಧ ಆಯಾಮಗಳ ಕಲಿಕಾ ಕಾರ್ಯಕ್ರಮ ಮಹತ್ವವಾದದ್ದು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಆಧುನಿಕ ತಂತ್ರಜ್ಞಾನ ಬಳಕೆ ಬಹಳ ಮುಖ್ಯವಾಗಿರುವುದರಿಂದ ಶಾಲೆಗಳು ಡಿಜಿಟಲ್ ತಂತ್ರಜ್ಞಾನ ಪಾಠಗಳನ್ನು ಅನುಭವಾತ್ಮಕವಾಗಿ ಕಲಿಯಬೇಕು. ಶಿಕ್ಷಕರು ಈ ಕಾರ್ಯಕ್ರಮ ಯಶಸ್ವಿ ಮಾಡಲು ಸಹಕರಿಸಬೇಕೆಂದು ಅವರು ಮನವಿ ಮಾಡಿದರು.
ಈ ಹಿನ್ನೆಲೆಯಲ್ಲಿ ಬಹುವಿಧ ಆಯಾಮಗಳ ಕಲಿಕಾ ಕಾರ್ಯಕ್ರಮದಡಿ ಶಾಲೆಗಳಿಗೆ ದಾನಿಗಳ ನೆರವಿನಿಂದ ತಳಹದಿ ಶಿಕ್ಷಣ, ಮಕ್ಕಳ ಸ್ನೇಹಿ ಗ್ರಂಥಾಲಯ, ವಿಜ್ಞಾನ ಪ್ರಯೋಗಾಲಯದ ಕಿಟ್, ವೃತ್ತಿಪರ ಮಾರ್ಗದರ್ಶನ, ಜೀವನ ಕೌಶಲ್ಯ ತರಬೇತಿ, ಸರ್ಕಾರ ಮತ್ತು ಐ.ಎಲ್.ಪಿ ಸಂಸ್ಥೆ ಅಭಿವೃದ್ಧಿಪಡಿಸಿದ ಡಿಜಿಟಲ್ ಪಾಠ ಪ್ರವಚನಗಳ ಬೋಧನೆಗೆ ಡಿಜಿಟಲ್ ಉಪಕರಣಗಳು ಒದಗಿಸಲಾಗುತ್ತಿದೆ ಎಂದರು.
ಈ ಕಾರ್ಯಕ್ರಮದಲ್ಲಿ 5 ಶಾಲೆಗಳಿಗೆ ಡಿಜಿಟಲ್ ಸ್ಮಾರ್ಟ್ ಟಿವಿ, 10 ಶಾಲೆಗಳಿಗೆ ಸೈನ್ಸ್ ಕಿಟ್ ಮತ್ತು 28 ಶಾಲೆಗಳಿಗೆ ಲೈಬ್ರರಿ ಕಿಟ್ ಪುಸ್ತಕಗಳು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಚೈಲ್ಡ್ ರೈಟ್ಸ್ ಟ್ರಸ್ಟ್ ಸಂಸ್ಥೆಯ ನಿರ್ದೇಶಕರಾದ ನಾಗಸಿಂಹ ಜಿ ರಾವ್, ಸಂಯೋಜಕ ವೆಂಕಟೇಶ್, ಶಿಡ್ಲಘಟ್ಟ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಸರಸ್ವತಮ್ಮ ಮತ್ತು ಮುಖ್ಯ ಶಿಕ್ಷಕ ನಾಗಭೂಷಣ್, ಶಿಕ್ಷಕರಾದ ಎಸ್.ಕಲಾಧರ್, ಚೈಲ್ಡ್ ರೈಟ್ಸ್ ಟ್ರಸ್ಟ್ ಸಂಸ್ಥೆಯ ಸಿಬ್ಬಂದಿ ಕಾಂತರಾಜು, ರಾಮಕ್ರಿಷ್ಣ, ಸತೀಶ್ ಹಾಜರಿದ್ದರು.