Sidlaghatta : ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದ್ದು ಕೋಲಾರ ಸಂಸತ್ ಕ್ಷೇತ್ರ ವ್ಯಾಪ್ತಿಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಸಹಾಯವಾಣಿ ಕೇಂದ್ರವನ್ನು ತೆರೆಯಲಾಗಿದೆ. ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿ ತಾಲ್ಲೂಕು ಕಚೇರಿಯಲ್ಲಿ ಸಹಾಯವಾಣಿಯನ್ನು ಆರಂಭಿಸಲಾಗಿದೆ.
ಚುನಾವಣೆ ಚಟುವಟಿಕೆಗಳು, ಮತ ಪ್ರಚಾರ, ಮತದಾರರಿಗೆ ಆಮಿಷ ಒಡ್ಡುವುದು, ಒತ್ತಡ ಹಾಕುವುದು ಸೇರಿದಂತೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಕುರಿತಂತೆ ಸಾರ್ವಜನಿಕರು ಅಥವಾ ಯಾರಾದರೂ ಸರಿ ಕರೆಮಾಡಿ ದೂರುಗಳನ್ನು ನೀಡಬಹುದು.
ಆದರೆ ಇದುವರೆಗೂ ಒಂದೇ ಒಂದು ಕರೆಯೂ ಬಂದಿಲ್ಲ, ಒಂದೆ ಒಂದು ದೂರು ದಾಖಲಾಗಿಲ್ಲ. ಮಾ.19 ರಿಂದ ಸಹಾಯವಾಣಿ ಕೇಂದ್ರವನ್ನು ಆರಂಭಿಸಿದ್ದು ದಿನದ 24 ಗಂಟೆಗಳ ಕಾಲವೂ ಮೂರು ಪಾಳಿಯಲ್ಲಿ ಚುನಾವಣಾ ಕಾರ್ಯಕ್ಕೆ ನೇಮಕವಾದ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಇದುವರೆಗೂ ಒಂದೇ ಒಂದು ಕರೆಯೂ ಸಹಾಯವಾಣಿ ಕೇಂದ್ರದಲ್ಲಿ ದಾಖಲಾಗಿಲ್ಲ.
ಸಹಾಯವಾಣಿ ಕೇಂದ್ರಕ್ಕೆ ಬರುವ ಕರೆಗಳನ್ನು ಸ್ವೀಕರಿಸಿ ದೂರು ಅಥವಾ ಸಮಸ್ಯೆಯನ್ನು ಸಂಬಂಧಿಸಿದ ಶಾಖೆಗೆ ರವಾನಿಸಿ ಅದನ್ನು ಅಲ್ಲಿ ದಾಖಲಿಸಲಾಗುತ್ತದೆ. ದೂರು ನೀಡಿದವರ ಅಥವಾ ಸಮಸ್ಯೆ ಹೇಳಿಕೊಂಡವರ ಹೆಸರು ಮೊಬೈಲ್ ನಂಬರ್ ದಾಖಲಿಸಿ ಗೌಪ್ಯತೆಯನ್ನು ಕಾಪಾಡಲಾಗುತ್ತದೆ.
ದೂರು ದಾಖಲಾದ 24 ಗಂಟೆಗಳೊಳಗೆ ದೂರಿನ ಬಗ್ಗೆ ತೆಗೆದುಕೊಂಡ ಕ್ರಮ, ಸಮಸ್ಯೆ ಇತ್ಯರ್ಥವಾಯಿತಾ ಇಲ್ಲವಾ ಇತ್ಯರ್ಥ ಆಗದಿದ್ದಕ್ಕೆ ಕಾರಣಗಳನ್ನು ದೂರುದಾರರಿಗೆ ವಿವರಿಸಲಾಗುತ್ತದೆ. ಸಹಾಯವಾಣಿ ಕೇಂದ್ರದ ದೂರವಾಣಿ ಸಂಖ್ಯೆ : 08158-256763.