Sidlaghatta : ಕೋಲಾರ ಸಂಸತ್ ಚುನಾವಣೆಯನ್ನು ಪಾರದರ್ಶಕವಾಗಿ, ಮುಕ್ತವಾಗಿ ನಡೆಸಲು ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಯು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಇದು ಪ್ರಜಾಪ್ರಭುತ್ವದ ಹಬ್ಬದಂತೆ ಚುನಾವಣೆಯನ್ನು ನಾವೆಲ್ಲರೂ ಸೇರಿ ಆಚರಿಸಬೇಕೆಂದು ಕೋಲಾರ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಅಕ್ರಂ ಪಾಷ ತಿಳಿಸಿದರು.
ಶಿಡ್ಲಘಟ್ಟ ತಾಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಅಕ್ರಂ ಪಾಷ ಅಕ್ರಂಪಾಷ ಅವರು, ಸಂಸತ್ ಚುನಾವಣೆಯನ್ನು ಪಾರದರ್ಶಕ, ಮುಕ್ತವಾಗಿ ನಡೆಸುವ ಹೊಣೆ ನಮ್ಮ ಮೇಲಿದೆ, ಅದಕ್ಕೆ ಎಲ್ಲರೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕೆಂದರು.
ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳಿದ್ದು, ಕೋಲಾರ ಜಿಲ್ಲೆಯ ಆರು ಕ್ಷೇತ್ರಗಳೊಂದಿಗೆ ಶಿಡ್ಲಘಟ್ಟ ಮತ್ತು ಚಿಂತಾಮಣಿ ಸಹ ಸೇರಿದೆ. ಚುನಾವಣೆಯನ್ನು ಸುಸೂತ್ರವಾಗಿ, ಪಾರದರ್ಶಕವಾಗಿ, ದೇಶಸೇವೆಗೆ ಸಿಕ್ಕ ಅವಕಾಶ ಎಂದು ಭಾವಿಸಿ ಅಧಿಕಾರಿಗಳು ಕಾರ್ಯನಿರ್ವಹಿಸಿ ಉತ್ತಮ ಹೆಸರು ತರಬೇಕು ಎಂದು ಹೇಳಿದರು.
ಅತಿ ಸೂಕ್ಷ್ಮ ಮತಗಟ್ಟೆ ಕೇಂದ್ರಗಳ ವ್ಯಾಪ್ತಿಯಲ್ಲಿ ಮತದಾರರಿಗೆ ಧೈರ್ಯ ತುಂಬುವ ಕೆಲಸವನ್ನು ನಾವು ಮಾಡಬೇಕಿದೆ. ಮತಗಟ್ಟೆಗೆ ಬಂದು ಧೈರ್ಯವಾಗಿ ತಮಗೆ ಇಷ್ಟ ಬಂದ ಅಭ್ಯರ್ಥಿ, ಪಕ್ಷಕ್ಕೆ ಮತ ಚಲಾಯಿಸುವಂತ ಮುಕ್ತ ನಿರ್ಭೀತ ವಾತಾವರಣ ಸೃಷ್ಟಿಸಬೇಕೆಂದರು.
ಚುನಾವಣಾ ಕಾರ್ಯಕ್ಕೆ ನೇಮಕಗೊಂಡ ಅಧಿಕಾರಿಗಳು ಪಕ್ಷ ಜಾತಿ ತಾರತಮ್ಯವಿಲ್ಲದೆ ಮುಕ್ತ ಹಾಗೂ ಪಾರದರ್ಶಕ ಚುನಾವಣೆ ನಡೆಸಲು ಸನ್ನದ್ಧರಾಗಬೇಕು ಹಾಗೂ ನಿಮ್ಮ ಈ ಮುಕ್ತ ಪಾರದರ್ಶಕ ಕಾರ್ಯಶೈಲಿಯು ಕೇವಲ ಕಾರ್ಯರೂಪದಲ್ಲಷ್ಟೆ ಅಲ್ಲ ಸಾರ್ವಜನಿಕವಾಗಿಯೂ ಪ್ರದರ್ಶಿತವಾಗಬೇಕೆಂದರು.
ಸಮಸ್ಯೆಗಳು ಸಹಜ ಏನೇ ಅನುಮಾನ ಸಮಸ್ಯೆ ಎದುರಾದರೂ ಮುಕ್ತವಾಗಿ ಕೇಳಿ ಬಗೆಹರಿಸಿಕೊಳ್ಳಿ. ನೀವು ಸಂಪೂರ್ಣವಾಗಿ ತಿಳಿದುಕೊಂಡರೆ ಮಾತ್ರವೇ ನೀವು ಇತರರಿಗೆ ಮನವರಿಕೆ ಮಾಡಿಕೊಡಲು ಸಾಧ್ಯ ಎಂದರು.
ಮತದಾನದಂದು ಪ್ರತಿ ಎರಡು ಗಂಟೆಗಳಿಗೊಮ್ಮೆ ಮತದಾನ ಪ್ರಮಾಣದ ಮಾಹಿತಿಯನ್ನು ಕೊಡಬೇಕು. ಇವಿಎಂ ಯಂತ್ರಗಳನ್ನು ರವಾನಿಸುವಾಗ ಬಹಳ ಎಚ್ಚರಿಕೆಯಿಂದ ಇರಬೇಕೆಂದು ಸೂಚಿಸಿದರು.
ಕೋಲಾರ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಗಳೂ ಆದ ಕೋಲಾರದ ಜಿಲ್ಲಾಧಿಕಾರಿ ಡಾ.ಅಕ್ರಂಪಾಷ ಅವರು ಶಿಡ್ಲಘಟ್ಟಕ್ಕೆ ಭೇಟಿ ನೀಡಿ ಮತಗಟ್ಟೆ ಕೇಂದ್ರ, ಭದ್ರತಾ ಕೊಠಡಿಗಳನ್ನು ವೀಕ್ಷಿಸಿ ಚುನಾವಣಾ ಕಾರ್ಯಕ್ಕೆ ನೇಮಕಗೊಂಡ ಅಧಿಕಾರಿಗಳ ಸಭೆ ನಡೆಸಿ ಚುನಾವಣೆಯ ಸಿದ್ದತೆಗಳ ಪರಿಶೀಲನೆ ನಡೆಸಿದರು.
ಸಹಾಯಕ ಚುನಾವಣಾಧಿಕಾರಿ ಜಾವಿದ ನಸೀಮ ಖಾನಂ, ಕೋಲಾರದ ಎಡಿಸಿ ಶಂಕರ್ ವಣಿಕ್ಯಾಳ್, ಡಿ.ವೈ.ಎಸ್.ಪಿ ಮುರಳೀಧರ್, ಶಿಡ್ಲಘಟ್ಟದ ತಹಶೀಲ್ದಾರ್ ಬಿ.ಎನ್.ಸ್ವಾಮಿ, ಇಒ ಮುನಿರಾಜ, ಸರ್ಕಲ್ ಇನ್ಸ್‌ಪೆಕ್ಟರ್ ಎಂ.ಶ್ರೀನಿವಾಸ್ ಸೇರಿದಂತೆ ಚುನಾವಣಾ ಕಾರ್ಯಕ್ಕೆ ನೇಮಕಗೊಂಡ ಅಧಿಕಾರಿಗಳು ಹಾಜರಿದ್ದರು.