Sidlaghatta : ಮತದಾರರ ಗುರ್ತಿನ ಚೀಟಿಗೆ ಆಧಾರ್ ಸಂಖ್ಯೆ ಜೋಡಿಸುವ ಕಾರ್ಯಾಚರಣೆಯನ್ನು ಚುರುಕುಗೊಳಿಸಿರುವ ಅಧಿಕಾರಿಗಳು ವಾರ್ಡುವಾರು ಭೇಟಿ ಕೊಟ್ಟು ಮತದಾರರಲ್ಲಿ ಅರಿವು ಮೂಡಿಸುತ್ತಿದ್ದಾರೆ.
ವಿದ್ಯಾವಂತ ಯುವಕ ಯುವತಿಯರಿಗೆ ಹೇಳಿಕೊಟ್ಟು ಅವರ ಮೂಲಕವೇ ಮತದಾರರ ಚೀಟಿಗೆ ಆಧಾರ್ ಸಂಖ್ಯೆ ಜೋಡಿಸುವ ಕಾರ್ಯಾಚರಣೆಯನ್ನು ಚುರುಕುಗೊಳಿಸುತ್ತಿದ್ದಾರೆ.
ಶಿಡ್ಲಘಟ್ಟ ನಗರದ ವಾರ್ಡ್ ನಂಬರ್ 2ಕ್ಕೆ ತಹಶೀಲ್ದಾರ್ ಬಿ.ಎಸ್.ರಾಜೀವ್, ನಗರಸಭೆ ಪೌರಾಯುಕ್ತ ಆರ್.ಶ್ರೀಕಾಂತ್ ಹಾಗೂ ಸಿಬ್ಬಂದಿಯು ಭೇಟಿ ನೀಡಿ ವಾರ್ಡ್‍ನ ನಗರಸಭೆ ಸದಸ್ಯ ಲಕ್ಷ್ಮಣ್ ಅವರ ನೆರವಿನಿಂದ ವಾರ್ಡಿನಲ್ಲಿನ ಮತದಾರರ ಗುರ್ತಿನ ಚೀಟಿಗಳಿಗೆ ಆಧಾರ್ ಸಂಖ್ಯೆಯನ್ನು ಜೋಡಿಸುವ ಕಾರ್ಯ ನಡೆಸಿದರು.
ಮತದಾರರ ಕಾರ್ಡಿಗೆ ಆಧಾರ್ ಸಂಖ್ಯೆಯನ್ನು ಜೋಡಿಸಲೆಂದು ನಿಯೋಜಿಸಿರುವ ಸಿಬ್ಬಂದಿಯ ಕೊರತೆ ಇರುವುದರಿಂದ ಆಯಾ ವಾರ್ಡಿನಲ್ಲಿನ ವಿದ್ಯಾವಂತ ಯುವಕ ಯುವತಿಯರಿಗೆ ಅವರ ಮೊಬೈಲ್‍ನಲ್ಲೆ ವಿಎಚ್‍ಎ ಆಪ್‍ನ್ನು ಡೌನ್‍ಲೋಡ್ ಮಾಡಿಸಿ ಅದರ ಮೂಲಕ ಗುರ್ತಿನ ಚೀಟಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡುವುದನ್ನು ಹೇಳಿಕೊಡಲಾಯಿತು.
ವಾರ್ಡ್‍ನ ಸದಸ್ಯರ ನೆರವಿನಿಂದ ಈ ವಾರ್ಡಿನ ಎಲ್ಲ ಮತದಾರರ ಗುರ್ತಿನ ಚೀಟಿಗಳಿಗೂ ಆಧಾರ್ ಸಂಖ್ಯೆಯನ್ನು ಜೋಡಿಸುವ ಕಾರ್ಯ ನಡೆಯಬೇಕು, ಇದರಿಂದ ನಕಲಿ ಮತದಾನ ಹಾಗೂ ಮತದಾನದ ದುರುಪಯೋಗವನ್ನು ತಡೆಯಬಹುದೆಂದು ತಹಶೀಲ್ದಾರ್ ರಾಜೀವ್ ತಿಳಿಸಿದರು. ಆರೋಗ್ಯ ನಿರೀಕ್ಷಕ ಮುರಳಿ, ವಾರ್ಡಿನ ಸದಸ್ಯ ಲಕ್ಷ್ಮಣ್, ಹರೀಶ್, ಗುಂಡ ಹಾಜರಿದ್ದರು.