Sidlaghatta : ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಲು ಹಿಂದೇಟು ಹಾಕುತ್ತಿರುವ ರಾಜ್ಯ ಸರ್ಕಾರದ ಕ್ರಮ ಖಂಡನೀಯ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ನಗರ ಘಟಕದ ಅಧ್ಯಕ್ಷ ಬಿ.ನಾರಾಯಣಸ್ವಾಮಿ ಹೇಳಿದರು.
ಬೆಂಗಳೂರಿನ ನ್ಯಾಷನಲ್ ಕಾಲೇಜು ಆವರಣದಲ್ಲಿ ಗುರುವಾರ ಹಮ್ಮಿಕೊಂಡಿರುವ ಬೃಹತ್ ರೈತ ಸಮಾವೇಶದಲ್ಲಿ ತಾಲ್ಲೂಕು ರೈತ ಸಂಘದ ಪದಾಧಿಕಾರಿಗಳೊಂದಿಗೆ ಪಾಲ್ಗೊಳ್ಳಲು ತೆರಳುವ ಮುನ್ನ ಮಾತನಾಡಿದರು.
ರೈತರ ನಿರಂತರ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಮೂರು ರೈತ ವಿರೋಧಿ ಕಾಯಿದೆಗಳನ್ನು ಹಿಂಪಡೆಯಿತಾದರೂ ರಾಜ್ಯ ಸರ್ಕಾರ ಈವರೆಗೂ ಕಾಯಿದೆಗಳನ್ನು ಹಿಂಪಡೆಯಲು ಹಿಂದೇಟು ಹಾಕುತ್ತಿದೆ. ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ಭೂ ಸುದಾರಣೆ ತಿದ್ದುಪಡಿ ಕಾಯಿದೆ, ಎಪಿಎಂಸಿ ಕಾಯಿದೆ ಹಾಗೂ ಭೂಸ್ವಾಧೀನ ಕಾಯಿದೆ ಮತ್ತು ಜಾನುವಾರು ಹತ್ಯೆ ನಿಷೇಧ ಕಾಯಿದೆಯನ್ನು ಕೂಡಲೇ ವಾಪಸ್ ಪಡೆಯಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರೈತ ಸಂಘದ ಮೂಲಕ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ವೇಣುಗೋಪಾಲ್, ರಾಮಕೃಷ್ಣಪ್ಪ, ರಾಮಚಂದ್ರಪ್ಪ, ವೆಂಕಟಪ್ಪ, ಸುರೇಶ್, ಮುರಳಿ, ಏಜಾಜ್, ದೇವರಾಜು, ಸಂತೋಷ್ ಹಾಜರಿದ್ದರು.