Sidlaghatta : ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಫೆಬ್ರವರಿ 10ರಂದು ಬೆಂಗಳೂರಿನ ಕರ್ನಾಟಕ ಹಾಲು ಮಹಾ ಮಂಡಳಿಯ ಕಚೇರಿ ಎದುರು ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ತಿಳಿಸಿದ್ದಾರೆ.
ನಗರದ ರೈತ ಸಂಘದ ಕಚೇರಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಹಾಲಿನ ಬಾಕಿ ಹಣ ಬಿಡುಗಡೆ ಮತ್ತು ಹಾಲಿನ ದರ ಹೆಚ್ಚಿಸಲು ಒತ್ತಾಯಿಸುವ ನಿಟ್ಟಿನಲ್ಲಿ ಈ ಪ್ರತಿಭಟನೆ ನಡೆಸಲಾಗುತ್ತಿದೆ. ರಾಜ್ಯದಲ್ಲಿ ನೀರಿಗೆ ಬರವಿದ್ದರೂ ಹಾಲಿಗೆ ಬರ ಬರದಂತಹ ಪರಿಸ್ಥಿತಿ. ಸದ್ಯ 25 ಲಕ್ಷ ರೈತ ಕುಟುಂಬಗಳು 15,450 ಹಾಲು ಉತ್ಪಾದಕರ ಸಂಘಗಳ ಮೂಲಕ ಪ್ರತಿದಿನ 80 ಲಕ್ಷ ಲೀಟರ್ ಹಾಲು ಹಾಲು ಮಹಾ ಮಂಡಳಿಗಳಿಗೆ ಒದಗಿಸುತ್ತಿವೆ. ಆದರೆ ಪಶು ಆಹಾರದ ಬೆಲೆ ಏರಿಕೆಯಾಗಿದ್ದು, ಬೆಳೆಪರಿಶೋಧನೆ ಪ್ರಕಾರ ಪ್ರತಿ ಲೀಟರ್ ಹಾಲಿಗೆ ಕನಿಷ್ಠ ₹50 ಖರ್ಚಾಗುತ್ತಿದೆ. ಸ್ವಾಮಿನಾಥನ್ ವರದಿಯ ಪ್ರಕಾರ ₹76 ನೀಡಬೇಕು, ಆದರೆ ಸರ್ಕಾರ ಈ ಕುರಿತು ಕ್ರಮ ಕೈಗೊಂಡಿಲ್ಲ,” ಎಂದು ದೂರಿದರು.
ಹಾಲು ಬೆಲೆ ಏರಿಕೆ – ಸರ್ಕಾರ ಕಣ್ಮುಚ್ಚಿ ಕುಳಿತಿದೆಯೇ?
ಜನವರಿ 1ರಿಂದ ಮುಖ್ಯಮಂತ್ರಿ ₹5 ಹೆಚ್ಚಳ ಮಾಡುವ ಭರವಸೆ ನೀಡಿದ್ದರು. ಆದರೆ 35 ದಿನಗಳಾದರೂ ಇನ್ನೂ ಬೆಲೆ ಏರಿಕೆ ಆಗಿಲ್ಲ. ಕುಡಿಯುವ ನೀರಿಗಿಂತ ಹಾಲು ಅಗ್ಗವಾಗಿದೆ ಎಂಬುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.
“ಹಾಲಿನ ಉತ್ಪಾದನೆ ಕುಸಿಯುತ್ತಿರುವ ಪ್ರಮುಖ ಕಾರಣ ರೈತರಿಗೆ ಸೂಕ್ತ ಬೆಲೆ ದೊರಕದಿರುವುದೇ. ರಾಜ್ಯ ಮತ್ತು ಕೇಂದ್ರ ಬಜೆಟ್‌ನಲ್ಲಿ ರೈತರನ್ನು ಕಡೆಗಣಿಸಲಾಗುತ್ತಿದೆ. ನಗರ ಕೇಂದ್ರಿತ ಅಭಿವೃದ್ಧಿಗೆ ಆದ್ಯತೆ ನೀಡುತ್ತಾ ಗ್ರಾಮೀಣ ಆರ್ಥಿಕತಿಯನ್ನು ನಿರ್ಲಕ್ಷಿಸಲಾಗುತ್ತಿದೆ. ಹೈನೋದ್ಯಮದ ಉಳಿವಿಗಾಗಿ, ಪ್ರತಿ ಲೀಟರ್ ಹಾಲಿಗೆ ಕನಿಷ್ಠ ₹50 ಬೆಲೆ ನಿಗದಿಪಡಿಸಬೇಕು,” ಎಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡರು ಮುನಿನಂಜಪ್ಪ, ಕೆಂಪರೆಡ್ಡಿ, ಮಳಮಾಚನಹಳ್ಳಿ ರಮೇಶ್, ದೇವರಾಜ್, ಭೀಮಣ್ಣ, ನಾರಾಯಣಸ್ವಾಮಿ, ನಾಗರಾಜು, ಕೃಷ್ಣಪ್ಪ, ಸೊಣ್ಣಪ್ಪರೆಡ್ಡಿ, ವಾಸುದೇವ್, ರಾಮಚಂದ್ರಪ್ಪ, ಜಗದೀಶ, ಸುಬ್ರಮಣಿ ಮತ್ತಿತರರು ಹಾಜರಿದ್ದರು.