27 C
Bengaluru
Friday, October 18, 2024

ಸೂಕ್ತ ಜಾಗದಲ್ಲಿ 100 ಹಾಸಿಗೆಗಳ ಸಾರ್ವಜನಿಕ ಆಸ್ಪತ್ರೆಯ ಭರವಸೆ

- Advertisement -
- Advertisement -

Sidlaghatta : ಸೂಕ್ತವಾದ ಜಾಗವನ್ನು ಗುರುತಿಸಿಕೊಟ್ಟಲ್ಲಿ ಈಗಿರುವ 50 ಹಾಸಿಗೆಗಳ ಈ ಆಸ್ಪತ್ರೆಯನ್ನು 100 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಿ ಮೂಲ ಸವಲತ್ತುಗಳನ್ನು ಕಲ್ಪಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ, 12 ಹಾಸಿಗೆಗಳ ಐಸೋಲೇಷನ್ ವಾರ್ಡ್, ಬಶೆಟ್ಟಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡದ ಉದ್ಘಾಟನೆ ಹಾಗು ಮೇಲೂರಿನ ಪ್ರಾಥಮಿಕ ಆರೋಗ್ಯ ಕೇಂದ್ರ ಆಸ್ಪತ್ರೆ ಹಾಗೂ ಡಯಾಲಿಸೀಸ್ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ರಾಜ್ಯದ ಜನತೆಗೆ ಉತ್ತಮ ಆರೋಗ್ಯದ ಸವಲತ್ತುಗಳನ್ನು ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದ್ದು ಅದಕ್ಕೆ ತಕ್ಕಂತೆ ಎಲ್ಲ ಆಸ್ಪತ್ರೆಗಳಲ್ಲೂ ಹಂತ ಹಂತವಾಗಿ ಮೂಲ ಸವಲತ್ತುಗಳನ್ನು ಕಲ್ಪಿಸಲಾಗುತ್ತಿದೆ. ಅನುದಾವನ್ನು ಸಹ ನೀಡಲಾಗುತ್ತಿದೆ ಎಂದು ಹೇಳಿದರು.

ಈ ಹಿಂದೆ ರಾಜ್ಯಾದಲ್ಲಿ 170 ಡಯಾಲಿಸಿಸ್ ಕೇಂದ್ರಗಳಿದ್ದವು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 52 ಡಯಾಲಿಸೀಸ್ ಕೇಂದ್ರಗಳನ್ನು ಆರಂಭಿಸಿದ್ದು ಇದೀಗ ಒಟ್ಟು 212 ಡಯಾಲಿಸೀಸ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದು ವಿವರಿಸಿದರು.

ಶಾಸಕ ಬಿ.ಎನ್.ರವಿಕುಮಾರ್ ಮಾತನಾಡಿ, ಹೆಚ್ಚಿನ ಸವಲತ್ತುಗಳುಳ್ಳ ಪ್ರಯೋಗಾಲಯ ಮತ್ತು ಡಯಲಿಸೀಸ್ ಕೇಂದ್ರ ನಿರ್ಮಾಣಕ್ಕೆ ಸಾರ್ವಜನಿಕರಿಂದ ಹೆಚ್ಚಿನ ಬೇಡಿಕೆಯಿತ್ತು. ಈ ದಿನ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯದ ಉದ್ಘಾಟನೆ ಆಗಿದೆ. 8 ಹಾಸಿಗೆಗಳ ಡಯಾಲಿಸೀಸ್ ಕೇಂದ್ರ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ಮಾಡಿದ್ದೇವೆ. ಶೀಘ್ರದಲ್ಲೆ ನಿರ್ಮಾಣ ಕಾರ್ಯ ಮುಗಿದು ಸಾರ್ವಜನಿಕ ಸೇವೆಗೆ ಸಮರ್ಪಿಸಲಿದ್ದೇವೆ ಎಂದರು.

ಸಾರ್ವಜನಿಕರಿಗೆ ಹೆಚ್ಚಿನ ಆರೋಗ್ಯ ಸವಲತ್ತುಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಬಶೆಟ್ಟಹಳ್ಳಿಯಲ್ಲಿ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣವಾಗಿದೆ. ಮೇಲೂರಿನಲ್ಲಿ 3 ಕೋಟಿ ರೂ.ವೆಚ್ಚದಲ್ಲಿ ಹೊಸ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ಈ ದಿನ ಭೂಮಿ ಪೂಜೆ ನೆರವೇರಿಸಿದ್ದು ಸಾರ್ವಜನಿಕರ ಪರವಾಗಿ ನನ್ನ ಬೇಡಿಕೆಗೆ ಸ್ಪಂದಿಸಿದ ರಾಜ್ಯ ಸರ್ಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು.

ಸಾರ್ವಜನಿಕ ಆಸ್ಪತೆಯಲ್ಲಿನ ಒಳ ರೋಗಿಗಳನ್ನು ಭೇಟಿ ಮಾಡಿ ಇಲ್ಲಿ ಸಿಗುತ್ತಿರುವ ಚಿಕಿತ್ಸೆ ಆರೈಕೆ ಸ್ವಚ್ಚತೆ ಕುರಿತು ಸಚಿವರು ವಿಚಾರಿಸಿದರು. ಸೂಕ್ತ ಜಾಗವನ್ನು ಗುರ್ತಿಸಿಕೊಟ್ಟರೆ 100 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಿ ಅಗತ್ಯ ಸವಲತ್ತುಗಳನ್ನು ಒದಗಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಸಿಇಒ ಪ್ರಕಾಶ್ ಜಿ.ನಿಟ್ಟಾಲಿ, ಡಿ.ಎಚ್‌.ಒ ಎಸ್.ಎಸ್.ಮಹೇಶ್ ಕುಮಾರ್, ಟಿ.ಎಚ್‌.ಒ ಡಾ.ವೆಂಕಟೇಶ್‌ಮೂರ್ತಿ, ಆಡಳಿತ ವೈದ್ಯಾಧಿಕಾರಿ ಡಾ.ಮನೋಹರ್, ತಹಶೀಲ್ದಾರ್ ಬಿ.ಎನ್.ಸ್ವಾಮಿ, ಇಒ ಹೇಮಾವತಿ, ಕಾಂಗ್ರೆಸ್ ಮುಖಂಡ ರಾಜೀವ್‌ಗೌಡ, ಪುಟ್ಟು ಆಂಜಿನಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸಹನಾರಾಜೀವ್‌ಗೌಡ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಅಪ್ಪೇಗೌಡನಹಳ್ಳಿ ಲಕ್ಷ್ಮಿನಾರಾಯಣರೆಡ್ಡಿ, ಜಿ.ಪಂ.ಮಾಜಿ ಸದಸ್ಯ ಬಂಕ್ ಮುನಿಯಪ್ಪ, ತಾದೂರು ರಘು, ಎ. ನಾಗರಾಜ್, ಟಿ.ಕೆ.ನಟರಾಜ್, ಮುನೀಂದ್ರ, ಯಾಸ್ಮೀನ್ ತಾಜ್, ಡಿ.ವಿ.ವೆಂಕಟೇಶ್ ಹಾಜರಿದ್ದರು.

ಕಾಂಗ್ರೆಸ್ ಮುಖಂಡರ ನಡುವೆ ವಾಗ್ವಾದ

ಕಾಂಗ್ರೆಸ್ ಮುಖಂಡರಾದ ರಾಜೀವ್‌ಗೌಡ ಮತ್ತು ಪುಟ್ಟು ಆಂಜಿನಪ್ಪ ಇಬ್ಬರನ್ನೂ ಕಳೆದ ಲೋಕಸಭೆ ಚುನಾವಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಒಂದು ಮಾಡಿದ್ದರು. ಈಚೆಗೆ ಎಲ್ಲಾ ಕಾಂಗ್ರೆಸ್ ಕಾರ್ಯಕ್ರಮಗಳಲ್ಲೂ ಇಬ್ಬರೂ ನಗುನಗುತ್ತಾ ಒಟ್ಟಿಗೇ ಕಾಣಿಸಿಕೊಳ್ಳುತ್ತಿದ್ದರು.

ಮೇಲೆ ತಣ್ಣಗೆ ಕಂಡರೂ ಒಳಗೆ ಜ್ವಾಲಾಮುಖಿ ಇರುವಂತೆ, ಕಾರ್ಯಕರ್ತರ ನಡುವೆ ಹೊಯ್ದಾಟಗಳು ಇದ್ದವು. ಅದು ಸಾರ್ವಜನಿಕ ಆಸ್ಪತ್ರೆಯ ಮುಂಭಾಗದಲ್ಲಿ ಬಹಿರಂಗವಾಯಿತು. ಇಬ್ಬರ ಮುಖಂಡರ ನಡುವೆ ಮಾತಿನ ಚಕಮಕಿ, ಕಾಂಗ್ರೆಸ್ ಕಾರ್ಯಕರ್ತರ ಎರಡು ಗುಂಪುಗಳ ನಡುವೆ ಬೈಯ್ದಾಟ ಸಚಿವ ಡಾ.ಎಂ.ಸಿ.ಸುಧಾಕರ್ ಮುಂದೆಯೇ ನಡೆದು, ಅವರಿಗೆ ಮುಜುಗರವನ್ನು ತಂದಿಟ್ಟರು

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.
Captcha verification failed!
CAPTCHA user score failed. Please contact us!
error: Content is protected !!