Sidlaghatta : ಶಿಡ್ಲಘಟ್ಟ ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ (Government PU College) ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪ್ರೌಢಶಾಲಾ ಶಿಕ್ಷಕರ ವಿಷಯವಾರು ತರಬೇತಿ ಕಾರ್ಯಾಗಾರ (Training Workshop), ಕಲಿಕಾಚೇತರಿಕೆ ಪ್ರಗತಿ ಪರಿಶೀಲನಾ ಸಮಾಲೋಚನಾ ಸಭೆಗಳನ್ನು ಉದ್ಘಾಟಿಸಿ ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರ ಕಚೇರಿಯ ವಿಷಯ ಪರಿವೀಕ್ಷಕಿ ಕೃಷ್ಣಕುಮಾರಿ ಅವರು ಮಾತನಾಡಿದರು.
ಭಾಷಾ ವಿಷಯ ಬೋಧಕರು ಬೋಧನೆಯಲ್ಲಿ ಕತೆ, ಕವನ, ಹಾಡುಗಾರಿಕೆ, ನಾಟಕಪ್ರದರ್ಶನದಂತಹ ವಿವಿಧ ವಿಧಾನಗಳನ್ನು ಬಳಸಿಕೊಳ್ಳಬೇಕು .ವಿದ್ಯಾರ್ಥಿಗಳಲ್ಲಿ ಭಾಷಾ ವಿಷಯ ಶಿಕ್ಷಕರು ಓದು, ಬರಹ, ಆಲಿಸುವಿಕೆಯಂತಹ ಸಾಮರ್ಥ್ಯಗಳಲ್ಲಿ ಹೆಚ್ಚು ಆಸಕ್ತಿಯನ್ನು ಕೆರಳಿಸಬೇಕು. ಮಕ್ಕಳು ಸ್ವತಃ ಓದುವ, ಸೃಜಿಸುವ ಗುಣವನ್ನು ಬೆಳೆಸಬೇಕು. ಅಧ್ಯಯನಶೀಲತೆ ಕುಸಿಯುತ್ತಿದ್ದು ಶಿಕ್ಷಕರು ಸೂಕ್ತ ಮಾರ್ಗದರ್ಶನ ನೀಡಬೇಕು. ಭಾಷಾ ವಿಷಯಗಳಲ್ಲಿ ವಿದ್ಯಾರ್ಥಿಗಳು ಪಡೆಯುವ ಪ್ರಬುದ್ಧತೆಯು ಇತರೆಲ್ಲಾ ವಿಷಯಗಳ ಕಲಿಕೆಗೆ ಸಹಕಾರಿಯಾಗುವುದು ಎಂದು ತಿಳಿಸಿದರು.
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನ್ಯಾಸಕಿ ಮಮತಾ ಮಾತನಾಡಿ, ಕೋವಿಡ್ ಹಿನ್ನೆಲೆಯಲ್ಲಿ ಎರಡು ವರ್ಷಗಳ ಕಾಲ ಶಾಲೆಗಳು ಸರಿಯಾಗಿ ನಡೆಯದೇ ಮಕ್ಕಳಿಗೆ ಆಗಿರುವ ಕಲಿಕಾ ನಷ್ಟವನ್ನು ಸರಿದೂಗಿಸಲು ಕಲಿಕಾ ಚೇತರಿಕೆ ಉಪಕ್ರಮವು ಉತ್ತಮವಾದ ಕ್ರಮವಾಗಿದೆ. ಕಲಿಕಾನಷ್ಟವನ್ನು ಸರಿದೂಗಿಸಿಕೊಳ್ಳಲು ಬಹುನಿರೀಕ್ಷೆಯಿಂದ ಕಲಿಕಾಚೇತರಿಕೆ ಕ್ರಮವನ್ನು ಈ ವರ್ಷ ಅನುಸರಿಸಲಾಗುತ್ತಿದೆ ಎಂದರು.
ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಎಲ್.ವೆಂಕಟರೆಡ್ಡಿ ಮಾತನಾಡಿ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಟಾನಗೊಳಿಸುತ್ತಿರುವ ಸಂದರ್ಭದಲ್ಲಿ ಅನೇಕ ಶೈಕ್ಷಣಿಕ ಬದಲಾವಣೆಗಳ ಅಗತ್ಯವಿದೆ. ಕಲಿಕಾ ಚೇತರಿಕೆಗಾಗಿ ಜಾರಿಗೊಳಿಸಿರುವ ವಿಷಯವಾರು ಕಲಿಕಾಹಾಳೆಗಳು, ಶಿಕ್ಷಕರ ಕೈಪಿಡಿ, ಚಟುವಟಿಕೆಗಳನ್ನು ಸಮರ್ಥವಾಗಿ ಬಳಸಿಕೊಂಡು ಕಲಿಕಾಫಲಗಳನ್ನಾಧರಿಸಿ ಕಲಿಕಾನಷ್ಟವನ್ನು ತುಂಬಲು ಪ್ರಯತ್ನಿಸಬೇಕು ಎಂದರು.
ಶಿಕ್ಷಣ ಸಂಯೋಜಕ ಇ.ಭಾಸ್ಕರಗೌಡ ಮಾತನಾಡಿ, ಮೂರು ವರ್ಷಗಳ ಕಲಿಕಾಫಲಗಳನ್ನು ನಿರ್ಧರಿಸಿ ಅದರ ಆಧಾರದಲ್ಲಿ ಚಟುವಟಿಕೆ, ಮಾದರಿ, ಉದಾಹರಣೆ, ಆಕರ್ಷಕ ಚಿತ್ರಗಳು, ನಿಜಜೀವನದಲ್ಲಿ ಬಳಸುವ ಸಾಮಾನ್ಯ ಅಂಶಗಳನ್ನು ಬಳಸಿಕೊಂಡು ಮಕ್ಕಳು ಆಸಕ್ತಿದಾಯಕವಾಗಿ ಕಲಿಕಾಫಲಗಳನ್ನು ಗಳಿಸಲು ಪೂರಕವಾಗಿ ಕಲಿಕಾಹಾಳೆಗಳು ಸಿದ್ಧವಾಗಿದ್ದು ಯಶಸ್ವಿಯಾಗಿ ಅನುಷ್ಟಾನವಾಗಬೇಕು ಎಂದರು.
ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಕಾರ್ಯದರ್ಶಿ ಎಚ್.ಎಸ್.ರುದ್ರೇಶಮೂರ್ತಿ, ಉಪಾಧ್ಯಕ್ಷ ಎಂ.ಕೆ.ಸಿದ್ಧರಾಜು, ಜಿಲ್ಲಾ ಸಂಘದ ಖಜಾಂಚಿ ಗೋಪಾಲಕೃಷ್ಣ ಮಾತನಾಡಿದರು. ಶಿಡ್ಲಘಟ್ಟ ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ನಿಕಟಪೂರ್ವ ಅಧ್ಯಕ್ಷ ಬೈರಾರೆಡ್ಡಿ, ಜಿಲ್ಲಾ ಪ್ರಶಸ್ತಿ ಪುರಸ್ಕೃತ ನವೋದಯ ಪ್ರೌಢಶಾಲೆಯ ಮುಖ್ಯಶಿಕ್ಷಕ ಎನ್.ಕೆ.ಸತ್ಯನಾರಾಯಣ್ ಅವರನ್ನು ಸನ್ಮಾನಿಸಲಾಯಿತು. ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಮಂಜುಳಾ, ವಿಷಯವಾರು ಸಂಪನ್ಮೂಲ ವ್ಯಕ್ತಿಗಳು, ತಾಲ್ಲೂಕಿನ ವಿವಿಧ ಶಾಲೆಗಳ ಶಿಕ್ಷಕರು ಪಾಲ್ಗೊಂಡಿದ್ದರು.









