ಸುಗಟೂರು ಶಾಲಾ ಆವರಣದಲ್ಲಿ 1600 ಗಿಡಗಳ ವಿತರಣೆಗೆ ಸಿದ್ಧತೆ

- Advertisement -
- Advertisement -

Sugaturu, Sidlaghatta : ಪರಿಸರದ ಪಾಠವನ್ನು ಶಾಲೆಯಲ್ಲಿ ಹೇಳಿಕೊಡುವ ಜೊತೆಗೆ ಮಕ್ಕಳಿಂದ ಪ್ರತಿ ಮನೆಗೆ ಗಿಡಗಳನ್ನು ವಿತರಿಸುವ, ಜಾಥಾದ ಮೂಲಕ ಜಾಗೃತಿ ಮೂಡಿಸಿ ಮುಂದಿನ ವರ್ಷಗಳಲ್ಲಿ ಇಡೀ ಗ್ರಾಮವನ್ನು ಹಸಿರು ಗ್ರಾಮವನ್ನಾಗಿಸುವ ಗುರಿಯಿಂದ ಪರಿಸರ ದಿನಾಚರಣೆ ನಡೆಸಲು ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಿರಿಯ ವಿದ್ಯಾರ್ಥಿಗಳು, ಗ್ರಾಮಸ್ಥರು ಸಜ್ಜಾಗಿದ್ದಾರೆ.

ಈಗಾಗಲೇ ಸುಮಾರು 2000 ಗಿಡಗಳು, ನೀರು ಹಾಕಿ ಪೋಷಿಸಲು ಬೇಕಾದ ಬಕೆಟ್‌ ಗಳು ವಿತರಣೆಗೆ ಸಿದ್ಧವಾಗಿದ್ದು, ಹಸಿರು ಸುಗಟೂರು ಶೀರ್ಷಿಕೆಯಲ್ಲಿ ಜೂನ್ 6 ರಂದು ಕಾರ್ಯಕ್ರಮ ನಡೆಯಲಿದೆ. ಅಂದು ಬೆಳಿಗ್ಗೆ 9.30 ಗಂಟೆಗೆ ಗ್ರಾಮದೇವತೆ ಶ್ರೀ ಸತ್ಯಮ್ಮ ದೇವಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಶಾಲಾ ಆವರಣಲ್ಲಿ ಸಸಿಗಳ ವಿತರಣೆ, ಸುಂದರಲಾಲ್‌ ಬಹುಗುಣ ಇಕೋ ಕ್ಲಬ್ ವತಿಯಿಂದ ಸಸಿ ನೆಡುವ, ವಿದ್ಯಾರ್ಥಿಗಳಿಗೆ ಎಚ್‌.ಡಿ.ಡಿ ಮತ್ತು ಜೆ.ಪಿ.ಎನ್ ಟ್ರಸ್ಟ್ ವತಿಯಿಂದ ಉಚಿತ ನೋಟ್‌ ಪುಸ್ತಕ ಮತ್ತು ಲೇಖನಸಾಮಗ್ರಿಗಳ ವಿತರಣಾ ಕಾರ್ಯಕ್ರಮ ನಡೆಯಲಿದೆ.

ಮನೆಮನೆಗೆ ಸಸಿ ವಿತರಣೆ: ಈಗಾಗಲೇ ತೆಂಗು, ಅಡಿಕೆ, ದಾಸವಾಳ, ಕಣಗಲೆ, ಪಾರಿಜಾತ, ನಂದಬಟ್ಟಲು, ವೀಳ್ಯದೆಲೆ ಮತ್ತಿತರ ಗಿಡಗಳನ್ನು ತಂದು ಜೋಡಿಸಲಾಗಿದ್ದು, ಟ್ರಾಕ್ಟರ್‌ಗಳಲ್ಲಿ ತುಂಬಿಕೊಂಡು ವಿದ್ಯಾರ್ಥಿಗಳು, ಹಿರಿಯ ವಿದ್ಯಾರ್ಥಿಗಳು, ಚುನಾಯಿತ ಪ್ರತಿನಿಧಿಗಳು ಪ್ರತಿ ಮನೆಮನೆಗೆ ತೆರಳಿ, ಪ್ರತಿ ಮನೆಗೆ ಎರಡು ಬಕೆಟ್‌ ಗಳು ಮತ್ತು ಕನಿಷ್ಟ ನಾಲ್ಕು ಗಿಡಗಳನ್ನು ವಿತರಿಸುವುದಾಗಿ ಮುಖ್ಯಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ತಿಳಿಸಿದ್ದಾರೆ.

ಶಾಲಾ ಮಕ್ಕಳು ಘೋಷವಾಕ್ಯಗಳೊಂದಿಗೆ ಜಾಥಾದಲ್ಲಿ ತೆರಳಿ ಜಾಗೃತಿ ಮೂಡಿಸಲು ವ್ಯವಸ್ಥೆ ಮಾಡಲಾಗಿದೆ. ಎಲ್ಲರೂ ತಪ್ಪದೇ ಮನೆಮನೆ ಮುಂದೆ, ಖಾಲಿ ಜಾಗದಲ್ಲಿ ಸಸಿಗಳನ್ನು ನೆಟ್ಟು ಪೋಷಿಸಬೇಕೆಂದು ಅರಿವು ಮೂಡಿಸಲಾಗಿದೆ. ಖಾಲಿ ಜಾಗ, ಶಾಲೆ, ಮನೆ, ದೇವಾಲಯಗಳ ಬಳಿ ಸುಮಾರು 100 ಕ್ಕೂ ಹೆಚ್ಚು ಗುಂಡಿಗಳು ತೆಗೆಸಲಾಗಿದ್ದು ಅಂದು ಗಿಡಗಳನ್ನು ನೆಡಲಾಗುತ್ತಿದೆ.

ಎಲ್ಲರ ಸಹಕಾರ: ಶಾಲೆಯ ಹಿರಿಯ ವಿದ್ಯಾರ್ಥಿ, ಬೆಂಗಳೂರು ಜಲಮಂಡಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂಜಿನಿಯರ್ ದಿನೇಶ್ ಮತ್ತಿತರರು ಸಾಕಷ್ಟು ಯೋಜನೆ ಮಾಡಿ, ಸಾಕಷ್ಟು ವ್ಯಯಿಸಿ ಸಹಕಾರ ನೀಡುತ್ತಿದ್ದು, ಗ್ರಾಮಪಂಚಾಯಿತಿ ಸದಸ್ಯರು, ವಿವಿಧ ಸಂಘಸಂಸ್ಥೆಗಳ ಸಹಕಾರದಲ್ಲಿ ಇಂತಹ ದೂರದೃಷ್ಟಿ ಕಾರ್ಯಕ್ರಮ ಮಾಡಲಾಗುತ್ತಿದೆ. ಎಲ್ಲರೂ ಸಸಿಗಳನ್ನು ನೆಟ್ಟು ಪೋಷಿಸಿದರೆ ಮುಂದಿನ ವರ್ಷ ಗ್ರಾಮಸ್ಥರನ್ನು ಶಾಲಾ ಆವರಣದಲ್ಲಿ ಸನ್ಮಾನಿಸಲು ತೀರ್ಮಾನಿಸಲಾಗಿದೆ.

ನೀರಿನ ಸಮಸ್ಯೆಗೆ ಪರಿಹಾರ: ಮುಂದಿನ ದಿನಗಳಲ್ಲಿ ಶುದ್ಧಗಾಳಿ, ಉತ್ತಮ ಪರಿಸರ, ಅಂತರ್ಜಲ ವೃದ್ಧಿಯೊಂದಿಗೆ ದೀರ್ಘಕಾಲದ ನೀರಿನ ಸಮಸ್ಯೆಗೆ ಪರಿಹಾರ ಸಿಗಬಹುದಾಗಿದೆ. ಈಗಾಗಲೇ “ಹಸಿರು ಸುಗಟೂರು” ವಾಟ್ಸಾಪ್ ಗ್ರೂಪ್ ರಚಿಸಲಾಗಿದ್ದು ಸಸಿಗಳ ಪೋಷಣೆ ಬಗ್ಗೆ ನಿಗಾ ವಹಿಸಲಾಗುವುದು. ಪೂರ್ವಜರಲ್ಲಿ ಗಿಡಮರಗಳ ಬಗ್ಗೆ ದೈವಿಕ ಭಾವನೆ ಇದ್ದಿತು. ಈ ಬಾರಿ ಮುಂಗಾರು ಪೂರ್ವ ಮಳೆ ಚೆನ್ನಾಗಿ ಆಗಿದ್ದು ಗಿಡಗಳನ್ನು ನೆಡಲು ಸೂಕ್ತವಾಗಿದೆ. ಎಲ್ಲರೂ ದೈವಿಕ ಭಾವನೆಯನ್ನು ಹೊಂದಿ ಪ್ರತಿವರ್ಷವೂ ಖಾಲಿ ಜಾಗಗಳಲ್ಲಿ ಸಸಿಗಳನ್ನು ನೆಡಬೇಕು. ಪರಿಸರದ ಬಗ್ಗೆ ಕಾಳಜಿ ಹೊಂದಿರುವ, ಗಿಡಗಳನ್ನು ಉತ್ತಮವಾಗಿ ಪೋಷಿಸುವವರನ್ನು ಸನ್ಮಾನಿಸಲಾಗುವುದು ಎನ್ನುತ್ತಾರೆ ಶಾಲೆಯ ಹಿರಿಯ ವಿದ್ಯಾರ್ಥಿ, ಎಂಜಿನಿಯರ್ ದಿನೇಶ್.

ವಿಶೇಷ ಯೋಜನೆ: ಶಾಲೆಗೆ ಭೇಟಿ ನೀಡಿ ಸಸಿ ಮತ್ತು ಸಿದ್ಧತೆಗಳನ್ನು ಪರಿಶೀಲಿಸಿದ ಜೆ.ವೆಂಕಟಾಪುರ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಾತ್ಯಾಯಿನಿ ಮಾತನಾಡಿ, ನಮ್ಮ ಪಂಚಾಯಿತಿ ವ್ಯಾಪ್ತಿಯ ಸುಗಟೂರು ಗ್ರಾಮದ ಸರ್ಕಾರಿ ಶಾಲೆಯು ಮಾದರಿಯಾಗಿದ್ದು, ಪರಿಸರ ದಿನಾಚರಣೆಯನ್ನು ವಿಶೇಷ ರೀತಿಯಲ್ಲಿ ಆಚರಣೆ ಮಾಡಲು ಸಜ್ಜಾಗಿರುವುದು ಶ್ಲಾಘನೀಯ. ಎಲ್ಲರೂ ಸಸಿಗಳನ್ನು ತಮ್ಮ ಮಕ್ಕಳಂತೆ ಪೋಷಿಸಬೇಕು ಎಂದು ತಿಳಿಸಿದರು.

600 ಸೀಡ್‌ ಬಾಲ್ಸ್ ಸಿದ್ಧ: ಕಳೆದ ಒಂದು ವರ್ಷದಿಂದ ಸಂಗ್ರಹಿಸಿ ಕೂಡಿಟ್ಟಿದ್ದ ವಿವಿಧ ಬಗೆಯ ಬೀಜಗಳನ್ನು ಬಳಸಿ ಈಗಾಗಲೇ ವಿದ್ಯಾರ್ಥಿಗಳು ಸುಮಾರು 600 ಕ್ಕೂ ಹೆಚ್ಚು ಸೀಡ್‌ ಬಾಲ್ಸ್‌ ಗಳನ್ನು ತಯಾರಿಸಿದ್ದಾರೆ. ಅವುಗಳನ್ನು ಬೆಟ್ಟ, ಗುಡ್ಡ, ಸರ್ಕಾರಿ ಜಮೀನುಗಳನ್ನು ವಿದ್ಯಾರ್ಥಿಗಳೊಂದಿಗೆ ತೆರಳಿ ಎಸೆಯಲಾಗುವುದು. ಶಾಲಾ ಆವರಣದಲ್ಲಿಯೂ ಹೂವು, ಹಣ್ಣಿನ ಗಿಡಗಳನ್ನು ನೆಡಲಾಗುವುದು. ಜಾಗತಿಕ ತಾಪಮಾನದ ಹೆಚ್ಚಳದ ಬಗ್ಗೆ ಅರಿವಾಗುತ್ತಿರುವುದರಿಂದ ಜನತೆಯಲ್ಲಿ ಇತ್ತೀಚೆಗೆ ಪರಿಸರ ಸಂರಕ್ಷಣೆಯ ಬಗ್ಗೆ ಕಾಳಜಿ ಹೆಚ್ಚುತ್ತಿರುವಂತೆ ಕಂಡುಬರುತ್ತಿದ್ದು, ಪ್ರಕೃತಿಯಲ್ಲಿ ಹೆಚ್ಚುತ್ತಿರುವ ಪ್ರಾಕೃತಿಕ ಅಸಮತೋಲನ ಮತ್ತು ಹವಾಮಾನ ವೈಪರೀತ್ಯದಂತಹ ಘಟನೆಗಳ ನಿವಾರಣೆಗೆ ಕಡ್ಡಾಯವಾಗಿ ಮರಗಿಡಗಳನ್ನು ಬೆಳೆಸಿ ಪರಿಸರ ಉಳಿಸುವುದೊಂದೇ ಅನಿವಾರ್ಯವಾದ ಕಾರ್ಯವಾಗಿದೆ. ಇನ್ನು ಮುಂದೆ ಗಿಡಮರಗಳ ಕ್ರಾಂತಿಯಾಗಬೇಕಿದೆ. ಕೇವಲ ಪರಿಸರ ದಿನಾಚರಣೆಯು ಒಂದು ದಿನಕ್ಕೆ ಮಾತ್ರ ಸೀಮಿತವಾಗದೇ ನಿತ್ಯ ನಿರಂತರ ಜವಾಬ್ದಾರಿಯಾಗಬೇಕು ಎನ್ನುತ್ತಾರೆ ಮುಖ್ಯಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!